ನವದೆಹಲಿ, ಜೂ 13 (DaijiworldNews/DB): ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳು ಆನ್ಲೈನ್ ಬೆಟ್ಟಿಂಗ್ ಫ್ಲ್ಯಾಟ್ಫಾರ್ಮ್ಗಳನ್ನು ಉತ್ತೇಜಿಸಬಾರದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ಸಲಹೆ ರೂಪದ ಸೂಚನೆ ನೀಡಿದೆ.
ಜಾಹೀರಾತು ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್, ಇಂಡಿಯನ್ ಬ್ರಾಡ್ಕಾಸ್ಟಿಂಗ್ ಫೌಂಡೇಶನ್, ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್, ಫೆಡರೇಷನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ನೊಂದಿಗೆ ಜಂಟಿ ಸಭೆ ನಡೆಸಿದ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಭೆಯ ಬಳಿಕ ಈ ಸಲಹೆ ನೀಡಿ ಮಾಧ್ಯಮಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಜೂಜಾಟ ಮತ್ತು ಬೆಟ್ಟಿಂಗ್ ಕಾನೂನುಬಾಹಿರ. ಆರ್ಥಿಕ ಮತ್ತು ಸಾಮಾಜಿಕ-ಆರ್ಥಿಕ ತೊಂದರೆಗೆ ಇದು ಕಾರಣವಾಗುತ್ತದೆ. ಅಲ್ಲದೆ, ಇವುಗಳ ಮೇಲೆ ಜಾಹೀರಾತು ಪ್ರಸಾರ ಮಾಡುವುದರಿಂದಲೂ ಅದು ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಚಿವಾಲಯವು ಅಭಿಪ್ರಾಯಪಟ್ಟಿದೆ.
ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಾಟಗಳ ಜಾಹೀರಾತು ಪ್ರಕಟಿಸುವುದು ಗ್ರಾಹಕ ಸಂರಕ್ಷಣಾ ಕಾಯ್ದೆ 2019, ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ ನಿಯಂತ್ರಣ ಕಾಯ್ದೆ, 1995 ರ ಅಡಿಯಲ್ಲಿ ಜಾಹೀರಾತು ಸಂಹಿತೆ ಮತ್ತು ಪ್ರೆಸ್ ಕೌನ್ಸಿಲ್ ಕಾಯ್ದೆ, 1978 ರ ಅಡಿಯಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ನಿಗದಿಪಡಿಸಿದ ಪತ್ರಿಕೋದ್ಯಮ ನಡವಳಿಕೆಯ ಮಾನದಂಡಗಳ ಅಡಿಯಲ್ಲಿ ಬರುವುದಿಲ್ಲ. ಅಲ್ಲದೆ ಇದನ್ನು ಉಲ್ಲಂಘಿಸಿದಂತೆಯೇ ಆಗುತ್ತದೆ. ಹೀಗಾಗಿ ಮಧ್ಯವರ್ತಿಗಳು, ಪ್ರಕಾಶಕರು ಸೇರಿದಂತೆ ಯಾರೇ ಆದರೂ ಇಂತಹ ಜಾಹೀರಾತುಗಳನ್ನು ಪ್ರಚಾರ ಮಾಡಬಾರದು ಎಂದು ಸಚಿವಾಲಯ ಸಲಹೆ ನೀಡಿದೆ.
ಆನ್ಲೈನ್ ಗೇಮಿಂಗ್ ಜಾಹೀರಾತುಗಳ ಸಂಬಂಧಿ ಎ.ಎಸ್.ಸಿ.ಐ. ಮಾರ್ಗಸೂಚಿಗಳನ್ನು ಪಾಲಿಸುವಂತೆ 2020ರಡಿಸೆಂಬರ್ 4ರಂದೇ ಸಚಿವಾಲಯವು ದೃಶ್ಯ ಮಾಧ್ಯಮಗಳಿಗೆ ಸಲಹೆ ನೀಡಿತ್ತು.