ಥಾಣೆ, ಜೂ 13 (DaijiworldNews/DB): ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಧೈರ್ಯಶಾಲಿ ಮಹಿಳೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮುಸ್ಲಿಂ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನಗರದ ನಿವಾಸಿ 19 ವರ್ಷದ ಮುಸ್ಲಿಂ ಯುವಕ ಬಂಧಿಸಲ್ಪಟ್ಟವನು. ಪ್ರವಾದಿ ಮಹಮ್ಮದ್ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ ಎಂದೂ ಈತನ ವಿರುದ್ದ ಆರೋಪಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ನೂಪುರ್ ಶರ್ಮಾರನ್ನು ಶ್ಲಾಘಿಸಿ ಈತ ಪೋಸ್ಟ್ ಮಾಡಿದ ಬೆನ್ನಲ್ಲೇ ಉದ್ರಿಕ್ತ ಗುಂಪೊಂದು ಆತನ ಮನೆಗೆ ತೆರಳಿ ಹಲ್ಲೆ ನಡೆಸಿರುವ ವೀಡಿಯೋ ವೈರಲ್ ಆಗಿದೆ. ಮುಸ್ಲಿಂ ಸಮುದಾಯದ ಹಲವರು ಈತನ ನಿವಾಸದೆದುರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದರು.