ಮಂಡ್ಯ, ಜೂ 13 (DaijiworldNews/DB): ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಗಳನ್ನು ಸ್ಕ್ಯಾನಿಂಗ್ಗೆ ಕರೆದೊಯ್ಯಲು ವ್ಹೀಲ್ಚೇರ್ ಸಿಗದ ಹಿನ್ನೆಲೆಯಲ್ಲಿ ಆಕೆಯನ್ನು ಎತ್ತಿಕೊಂಡೇ ಹೋದ ಘಟನೆ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.
ರಾಮನಗರದ ವ್ಯಕ್ತಿಯೊಬ್ಬರು ತಮ್ಮ ಪುತ್ರಿಯನ್ನು ಮಿಮ್ಸ್ನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಆಕೆಗೆ ಮೂಗಿನ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿತ್ತು. ಅಲ್ಲದೆ, ಓಡಾಡಲೂ ಸಾಧ್ಯವಾಗುತ್ತಿರಲಿಲ್ಲ. ಚಿಕಿತ್ಸೆ ನೀಡುವ ವೈದ್ಯರು ಸ್ಕ್ಯಾನಿಂಗ್ ಮಾಡಿಸುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ಗೆ ಮಗಳನ್ನು ಕರೆದೊಯ್ಯಲು ತಂದೆ ವ್ಹೀಲ್ಚೇರ್ ಕೇಳಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವ್ಹೀಲ್ಚೇರ್ ಸಿಗದ ಹಿನ್ನೆಲೆಯಲ್ಲಿ ತಡ ಮಾಡದೆ ಆಕೆಯನ್ನು ಎತ್ತಿಕೊಂಡೇ ಸ್ಕ್ಯಾನಿಂಗ್ ಸೆಂಟರ್ಗೆ ಹೋಗಿದ್ದಾರೆ.
ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಒಂದಲ್ಲ ಒಂದು ಅಚಾತುರ್ಯಗಳು ಘಟಿಸುತ್ತಲೇ ಇವೆ. ಕಳೆದ ವರ್ಷ ಗರ್ಭಿಣಿಯೊಬ್ಬರ ಹೆರಿಗೆ ಮಾಡಿಸಿದ ಸಿಬಂದಿ ಶಿಶುವನ್ನು ಹಿಡಿದುಕೊಂಡಾಗ ಶಿಶು ಕೈಯಿಂದ ಜಾರಿ ಮೃತಪಟ್ಟ ಘಟನೆ ನಡೆದಿತ್ತು. ಅಲ್ಲದೆ, ಗರ್ಭಿಣಿ, ಬಾಣಂತಿಯರನ್ನು ನೆಲದ ಮೇಲೆಯೇ ಮಲಗಿಸಿ ಅಚಾತುರ್ಯ ಉಂಟು ಮಾಡುವುದು ಇಲ್ಲಿ ಸಾಮಾನ್ಯ ಎಂಬಂತಾಗಿದೆ.