ಬೆಂಗಳೂರು, ಜೂ 13 (DaijiworldNews/DB): ಸಿಬಿಐ, ಇಡಿ, ಐಟಿ ಮುಂತಾದ ಸ್ವತಂತ್ರ ಸಂಸ್ಥೆಗಳನ್ನು ಮೋದಿ ಸರ್ಕಾರವು ತನ್ನ ಕೂಗೊಂಬೆಯನ್ನಾಗಿ ಮಾಡಿಕೊಂಡಿದೆ. ಕೇಂದ್ರದ ತಾಳಕ್ಕೆ ತಕ್ಕಂತೆ ಈ ಸಂಸ್ಥೆಗಳು ಕುಣಿಯುತ್ತಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇಡಿ ಸಮನ್ಸ್ ವಿಚಾರವಾಗಿ ಶಾಂತಿನಗರದ ಇಡಿ ಕಚೇರಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಇಂದು ಮಾತನಾಡಿದಂತ ಅವರು, ಸ್ವತಂತ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಆಡಳಿತ ಪಕ್ಷವು ವಿಪಕ್ಷಗಳ ಮೇಲೆ ಛೂ ಬಿಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಇಲ್ಲಿವರೆಗೂ ಸ್ವತಂತ್ರ ಸಂಸ್ಥೆಗಳನ್ನು ಯಾವುದೇ ಸರ್ಕಾರಗಳೂ ಈ ರೀತಿಯಾಗಿ ದುರ್ಬಳಕೆ ಮಾಡಿಕೊಂಡಿಲ್ಲ. ಆಡಳಿತ ಸರ್ಕಾರದ ವಿರುದ್ದ ಇರುವವರನ್ನು ಸಿಬಿಐ, ಐಟಿ ದಾಳಿ ಮಾಡಿ ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದರು.
ಯೋಜನಾ ಆಯೋಗದ ಬದಲು ನೀತಿ ಕಮಿಷನ್ ಮಾಡಿದ್ದಾರೆ. ಪ್ರಜಾಪ್ರಭುತ್ವವನ್ನೇ ಹತ್ತಿಕ್ಕುವ ಕೆಲಸ ಆಡಳಿತ ಪಕ್ಷದಿಂದ ಆಗುತ್ತಿದೆ. ವಿಚಾರಣೆ ನೆಪದಲ್ಲಿ ಸುಳ್ಳು ಕೇಸ್ ಹಾಕಿ ಹೆದರಿಸಲು ಹೊರಟಿದ್ದಾರೆ. ರಾಹುಲ್, ಸೋನಿಯಾ ವಿರುದ್ದ ಜಾರಿ ನಿರ್ದೇಶನಾಲಯವನ್ನು ಛೂ ಬಿಟ್ಟಿದ್ದಾರೆ ಎಂದವರು ಆಪಾದಿಸಿದರು.
ಹೆಡ್ಗೇವಾರ್ ಎಂದಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರಾ ಎಂದು ಪ್ರಶ್ನಿಸಿದ ಅವರು, ಬ್ರಿಟಿಷರೊಂದಿಗೆ ಸೇರಿಕೊಂಡು ಆರೆಸ್ಸೆಸ್ನವರು ಕ್ವಿಟ್ ಇಂಡಿಯಾ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನ ಪಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಶೇ. 40ರಷ್ಟು ಕಮಿಷನ್ ಆರೋಪ ಬಂದಾಗ ಖುದ್ದು ಪ್ರಧಾನಿ ಮೋದಿಯವರಿಗೇ ದೂರು ನೀಡಿದರೂ ಏನಾದರೂ ಕ್ರಮ ಕೈಗೊಂಡರಾ? ನಾಚಿಕೆ, ಮಾನ ಮರ್ಯಾದೆ ಎಂಬುದೇ ಬಿಜೆಪಿಯವರಿಗಿಲ್ಲ. ಸ್ವತಂತ್ರ ಸಂಸ್ಥೆಗಳನ್ನು ಬಳಸಿಕೊಂಡು ಹೆದರಿಕೆ ಹುಟ್ಟಿಸಿದರೆ ನಮ್ಮ ಆತ್ಮಸ್ಥೈರ್ಯ ಕುಗ್ಗುವುದಿಲ್ಲ ಎಂದವರು ಇದೇ ವೇಳೆ ತಿಳಿಸಿದರು.