ಭೋಪಾಲ್, ಜೂ 13 (DaijiworldNews/DB): ಸೋದರ ಸಂಬಂಧಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ವ್ಯಕ್ತಿಯೊಬ್ಬರು ಆಕೆಯ ಚಿತೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಾಗರ ಜಿಲ್ಲೆಯ ಮಜ್ಗವಾನ್ ಗ್ರಾಮದ ಜ್ಯೋತಿ ಎಂಬವರು ಕಳೆದ ಶುಕ್ರವಾರ ಬಾವಿಗೆ ಬಿದ್ದು ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಶನಿವಾರ ನಡೆದಿತ್ತು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರೆಲ್ಲರೂ ಮನೆಗೆ ತೆರಳಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಆಕೆಯ ಸೋದರ ಸಂಬಂದ ಕರಣ್ (21) ಎಂಬಾತ ಸ್ಮಶಾನದ ಬಳಿ ಬಂದು ಉರಿಯುತ್ತಿದ್ದ ಜ್ಯೋತಿಯ ಚಿತೆಗೆ ನಮಿಸಿ ಬಳಿಕ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ತತ್ಕ್ಷಣ ಮನೆಯವರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದರೆ ಮನೆಯವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆತ ಸಂಪೂರ್ಣ ಸುಟ್ಟು ಹೋಗಿದ್ದ. ತತ್ಕ್ಷಣ ಆತನ ದೇಹವನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಆತ ಸಾವನ್ನಪ್ಪಿದ್ದ. ಬಳಿಕ ಜ್ಯೋತಿ ಸಮಾಧಿಯ ಬಳಿಯೇ ಕರಣ್ ಅಂತ್ಯಕ್ರಿಯೆ ನಡೆಸಲಾಯಿತು ಎಂದು ವರದಿಯಾಗಿದೆ.