ನವದೆಹಲಿ/ಬೆಂಗಳೂರು, ಜೂ 13 (DaijiworldNews/DB): ಕಾಂಗ್ರೆಸ್ ಧ್ವನಿ ಹತ್ತಿಕ್ಕಲು ಬಿಜೆಪಿ ಯತ್ನಿಸುತ್ತಿದೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಇಡಿಯಿಂದ ಸಮನ್ಸ್ ಜಾರಿ ಕ್ರಮ ಖಂಡಿಸಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ವೇಳೆ ಅವರು ಸೋಮವಾರ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ಕಾಂಗ್ರೆಸ್ ಧ್ವನಿ ಹತ್ತಿಕ್ಕಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಇದೀಗ ಅದೇ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಆದರೆ ಬಿಜೆಪಿಗೂ ಇಂತಹ ಪ್ರಯತ್ನ ಸಾಧ್ಯ ಆಗುವುದಿಲ್ಲ ಎಂಬುದು ನೆನಪಿರಲಿ ಎಂದರು.
ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ಹೆದರಿಕೆ, ಕುಗ್ಗಿ ಸುಮ್ಮನಾಗುವಿಕೆ ನಮ್ಮಲ್ಲಿಲ್ಲ. ಸತ್ಯ ಕಾ ಸಂಗ್ರಾಮ್ ಹೋರಾಟವು ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದುವರಿಯಲಿದೆ ಎಂದವರು ತಿಳಿಸಿದರು.
ರಾಹುಲ್ ಗಾಂಧಿ ಇಡಿ ಕಚೇರಿಗೆ ಇಂದು ವಿಚಾರಣೆಗೆ ಹಾಜರಾಗುತ್ತಿದ್ದಂತೆ ಇತ್ತ ದೆಹಲಿ ಮತ್ತು ಬೆಂಗಳೂರಿನಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಕಲ್ಪಿಸಿದ್ದು, ಈಗಾಗಲೇ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.