ಲಖನೌ, ಜೂ 13 (DaijiworldNews/DB): ಪ್ರವಾದಿ ಮಹಮ್ಮದ್ ಕುರಿರು ಬಿಜೆಪಿ ನಾಯಕರಾದ ನೂಪುರ್ ಶರ್ಮ ಹಾಗೂ ನವೀನ್ ಕುಮಾರ್ ಜಿಂದಾಲ್ ಅವಹೇಳನ ಮಾಡಿರುವುದನ್ನು ಖಂಡಿಸಿ ದೇಶಾದ್ಯಂತ ಕಳೆದ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಹಿಂಸಾತ್ಮಕ ಕೃತ್ಯ ಎಸಗಿದ ಆರೋಪದ ಮೇಲೆ 400ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ, ಜಾರ್ಖಂಡ್ ಸೇರಿದಂತೆ ವಿವಿಧೆಡೆ ಪ್ರತಿಭಟನೆಯು ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಅಲ್ಲಲ್ಲಿ ಕಲ್ಲು ತೂರಾಟ, ಸಾರ್ವಜನಿಕ ಆಸ್ತಿ ಹಾನಿ, ಪೊಲೀಸ್ ಠಾಣೆಗೆ ಹಾನಿ ಸೇರಿದಂತೆ ವಿವಿಧ ಘಟನೆಗಳು ನಡೆದಿತ್ತು. ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಬೆಥುಯಾದಹರಿ ರೈಲು ನಿಲ್ದಾಣದಲ್ಲಿ ರೈಲಿಗೆ ಹಾನಿ ಮಾಡಲಾಗಿತ್ತು. ವಿವಿಧ ಕಡೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ 400ಕ್ಕೂ ಹೆಚ್ಚು ಮಂದಿ ಬಂಧಿಸಲ್ಪಟ್ಟಿದ್ದಾರೆ.
ಉತ್ತರ ಪ್ರದೇಶದ ಒಂಬತ್ತು ಜಿಲ್ಲೆಗಳಲ್ಲಿ ಒಟ್ಟು 13 ಪ್ರಕರಣ ದಾಖಲಾಗಿದ್ದು, ಎಂಟು ಜಿಲ್ಲೆಗಳಲ್ಲಿ ಒಟ್ಟು 304 ಮಂದಿ, ಪಶ್ಚಿಮ ಬಂಗಾಳದ ಹೌರಾ, ಮುರ್ಷಿದಾಬಾದ್ ಜಿಲ್ಲೆಯಲ್ಲಿ 100 ಜನರು ಸದ್ಯ ಪೊಲೀಸ್ ವಶದಲ್ಲಿದ್ದಾರೆ.
ರಾಂಚಿಯಲ್ಲಿ 25 ಮಂದಿ ವಿರುದ್ದ ಎಫ್ಐಆರ್ ದಾಖಲಾಗಿವೆ. ಪ್ರಯಾಗ್ರಾಜ್ನಲ್ಲಿ 91, ಸಹರಾನ್ಪುರದಲ್ಲಿ 71, ಹತರಾಸ್ನಲ್ಲಿ 51, ಫಿರೋಜಾಬಾದ್ನಲ್ಲಿ 15, ಅಂಬೇಡ್ಕರ್ನಗರ ಮತ್ತು ಮೊರಾದಾಬಾದ್ನಲ್ಲಿ ತಲಾ 34 ಮಂದಿ, ಅಲಿಗಢದ ಆರು, ಜಲೌನ್ನ ಇಬ್ಬರು ಸದ್ಯ ಪೊಲೀಸ್ ವಶದಲ್ಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.