ರಾಂಚಿ, ಜೂ 12 (DaijiworldNews/SM): ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ರವಿವಾರ ಉದ್ವಿಗ್ನತೆ ಉಂಟಾಗಿದ್ದು, ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಬಗೆಗಿನ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯ ನಂತರ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಜೊತೆಗೆ ಸಾವಿರಾರು ಜನರ ವಿರುದ್ಧ 25 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಇದೇ ವೇಳೆ ಸುಮಾರು 33 ಗಂಟೆಗಳ ನಂತರ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಮತ್ತೆ ಆರಂಭಿಸಲಾಗಿದೆ ಎಂದು ರಾಂಚಿ ಉಪ ಆಯುಕ್ತ ಛವಿ ರಂಜನ್ ತಿಳಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ನಂತರ ನಗರದಲ್ಲಿ ನಡೆದ ಪ್ರತಿಭಟನೆಗಳು ಮತ್ತು ಘರ್ಷಣೆಗಳಿಂದಾಗಿ ರಾಂಚಿಯ ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 3,500 ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಹಿಂಸಾಚಾರದ ವೇಳೆ ಇಬ್ಬರು ಸಾವನ್ನಪ್ಪಿದ್ದರೆ, ಅನೇಕ ಜನರು ಗಂಭೀರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಮತ್ತು ಮಾಜಿ ನಾಯಕ ನವೀನ್ ಜಿಂದಾಲ್ ಅವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.