ಚಿಕ್ಕಮಗಳೂರು, ಜೂ 12 (DaijiworldNews/DB): ಅಸ್ಸಾಂನ ಗುವಾಹಟಿಯಲ್ಲಿ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಚಿಕ್ಕಮಗಳೂರಿನ ಮಸಿಗದ್ದೆಯ ಯೋಧ ಎಂ.ಎನ್. ಗಣೇಶ್ (36) ಅವರ ಮೃತದೇಹ ಬಿಹಾರದ ಕಿಶನ್ಗಂಜ್ ಪ್ರದೇಶದಲ್ಲಿ ಶನಿವಾರ ಪತ್ತೆಯಾಗಿದೆ.
ಏ.24ರಂದು ಊರಿಗೆ ಬಂದಿದ್ದ ಅವರು, ಜೂನ್ 9ರಂದು ಮತ್ತೆ ಕರ್ತವ್ಯಕ್ಕೆಂದು ಮರಳಿದ್ದರು. ಜೂ. 12ರಂದು ಗುವಾಹಟಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಇದೀಗ ಸಾವನ್ನಪ್ಪಿದ್ದು, ಭಾನುವಾರ ಮುಂಜಾನೆ ಶವ ಪತ್ತೆಯಾಗಿರುವ ಬಗ್ಗೆ ಆಂಬುಲೆನ್ಸ್ ಸಿಬಂದಿಯೊಬ್ಬರು ಕರೆ ಮಾಡಿ ಮಾಹಿತಿ ನೀಡಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ಗಣೇಶ್ ಪತ್ನಿ ಶ್ವೇತಾ ತಿಳಿಸಿರುವುದಾಗಿ ವರದಿಯಾಗಿದೆ. ಸಾವಿಗೆ ಕಾರಣ ಏನೆಂಬುದು ಗೊತ್ತಾಗಿಲ್ಲ. ಕಿಶನ್ ಗಂಜ್ ಪ್ರದೇಶದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸೇನಾ ತಂಡದವರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಮಸಿಗದ್ದೆಯ ಕೂಲಿಕಾರ ನಾಗಯ್ಯ ಮತ್ತು ಗಂಗಮ್ಮ ದಂಪತಿ ಪುತ್ರ ಗಣೇಶ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಾಜಸ್ತಾನ, ದೆಹಲಿ, ಗೋವಾ, ಜಮ್ಮುವಿನಲ್ಲಿ ಅವರು ಕರ್ತವ್ಯ ನಿರ್ವಹಣೆ ಮಾಡಿದ್ದರು. ಆರು ವರ್ಷದ ಹಿಂದೆ ಶ್ವೇತಾ ಅವರೊಂದಿಗೆ ವಿವಾಹವಾಗಿದ್ದು, ಆದ್ಯಾ ಹೆಸರಿನ ಹೆಣ್ಣು ಮಗುವಿದೆ. ಗಣೇಶ್ ಪಾರ್ಥಿವ ಶರೀರವನ್ನು ಮುಂದಿನ ಎರಡು ದಿನಗಳಲ್ಲಿ ಹುಟ್ಟೂರಿಗೆ ಕಳುಹಿಸಲಾಗುವುದು ಎಂದು ಸೇನೆ ಮಾಹಿತಿ ನೀಡಿದೆ.