ನವದೆಹಲಿ, ಜೂ 12 (DaijiworldNews/DB): ಕೊರೊನಾ ನಂತರ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ಸೋನಿಯಾ ಗಾಂಧಿ ಭಾನುವಾರ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಸ್ವಲ್ಪ ದಿನಗಳ ಕಾಲ ಅಲ್ಲೇ ಇದ್ದು ಚಿಕಿತ್ಸೆ ಪಡೆಯಲಿದ್ದಾರೆ. ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಕೊರೋನೋತ್ತರ ಸಮಸ್ಯೆಗಳ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದಾಗಿ ಇದೀಗ ಮಾಹಿತಿ ಲಭ್ಯವಾಗಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿ ಜೂನ್ 8 ರಂದು ತಪಾಸಣೆಗೆ ಹಾಜರಾಗುವಂತೆ ತಿಳಿಸಿತ್ತು. ಆದರೆ ಕೊರೊನಾ ಸೋಂಕಿಗೆ ಒಳಗಾದ ಕಾರಣ ಅವರು ಬೇರೆ ದಿನದಂದು ಹಾಜರಾಗಲು ದಿನಾಂಕ ನಿಗದಿ ಮಾಡುವಂತೆ ಇಡಿಯನ್ನು ಕೋರಿದ್ದರು. ಇದೀಗ ಜೂನ್ 23ರಂದು ವಿಚಾರಣೆಗೆ ಹಾಜರಾಗಲು ಇಡಿ ಸೂಚಿಸಿದೆ ಎನ್ನಲಾಗಿದೆ.