ಉಜ್ಜೈನಿ, ಜೂ 12 (DaijiworldNews/DB): ದೇಹದ ತೂಕ ಇಳಿಸಿಕೊಂಡರೆ ಪ್ರತಿ ಕೆಜಿ ಇಳಿಕೆ ತೂಕಕ್ಕೆ 1,000 ಕೋಟಿ ರೂ. ರೂ.ಗಳಂತೆ ಕ್ಷೇತ್ರಾಭಿವೃದ್ದಿಗೆ ಅನುದಾನ ನೀಡಲಾಗುವುದು ಎಂಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಸವಾಲನ್ನು ಸ್ವೀಕರಿಸಿದ ಸಂಸದರೊಬ್ಬರು ಕಳೆದ ನಾಲ್ಕು ತಿಂಗಳಲ್ಲಿ ಅವರು 15 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ.
ಮಧ್ಯ ಪ್ರದೇಶದ ಉಜ್ಜೈನಿಯ ಸಂಸದ ಅನಿಲ್ ಫಿರೋಜಿಯಾ ಅವರೇ ಗಡ್ಕರಿ ಸವಾಲು ಸ್ವೀಕರಿಸಿ ತೂಕ ಇಳಿಸಿಕೊಂಡವರು. ವರ್ಷಾರಂಭದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ್ದ ಗಡ್ಕರಿ ಬೊಜ್ಜು ಕರಗಿಸಿಕೊಂಡರೆ ಹಣ ಹಂಚಿಕೆ ಮಾಡುವುದಾಗಿ ಹೇಳಿದ್ದರು. ಪ್ರತಿ ಕೆಜಿ ತೂಕ ಇಳಿಕೆಗೆ 1,000 ಕೋಟಿ ರೂ. ಹಂಚಿಕೆ ಮಾಡುವುದಾಗಿ ಹೇಳಿದ್ದ ಗಡ್ಕರಿ ಫಿಟ್ ಆಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಈ ಘೋಷಣೆ ಮಾಡಿರುವುದಾಗಿ ಹೇಳಿದ್ದರು. ಹೀಗಾಗಿ ಕಳೆದ ಫೆಬ್ರವರಿಯಿಂದ ಅನಿಲ್ ಫಿರೋಜಿಯಾ ಬೊಜ್ಜು ಕರಗಿಸುವ ಪ್ರಯತ್ನವನ್ನು ನಡೆಸಿದ್ದು, ಇಲ್ಲಿವರೆಗೆ 15 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಫೆಬ್ರವರಿ ವೇಳೆಗೆ ಅನಿಲ್ ಫಿರೋಜಿಯಾ ಅವರು 127 ಕೆ.ಜಿ. ತೂಕ ಹೊಂದಿದ್ದರು.
ದೈಹಿಕ ವ್ಯಾಯಾಮ, ಸೈಕ್ಲಿಂಗ್, ಯೋಗ ಪ್ರತಿದಿನ ಮಾಡುತ್ತಿದ್ದೆ. ಅಲ್ಲದೆ, ನಿಯಮಿತ ಆಹಾರ ಕ್ರಮವನ್ನು ರೂಢಿಸಿಕೊಂಡಿದ್ದೆ. ಈಗ ನಾನು 15 ಕೆ.ಜಿ. ತೂಕ ಇಳಿಸಿಕೊಂಡಿದ್ದು, ನನ್ನ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗಾಗಿ 15,000 ಕೋಟಿ ರೂ. ಕೇಳಲು ಅರ್ಹತೆ ಹೊಂದಿದ್ದೇನೆ. ಮುಂದೆ ಇನ್ನಷ್ಟು ತೂಕ ಇಳಿಸಿಕೊಳ್ಳುವುದಾಗಿಸಂಸದ ಅನಿಲ್ ಫಿರೋಜಿಯಾ ಹೇಳುತ್ತಾರೆ.