ಬೆಂಗಳೂರು, ಜೂ 12 (DaijiworldNews/HR): ರಾಜಕೀಯ ಎದುರಾಳಿಗಳನ್ನು ಎದುರಿಸಲಾಗದ ಬಿಜೆಪಿ, ಇಡಿ ಮತ್ತು ಸಿಬಿಐನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮೋದಿಯವರು ಪ್ರಧಾನಿಯಾದ ಬಳಿಕ ಕೇವಲ ವಿರೋಧ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಇಡಿ, ಸಿಬಿಐ ಮತ್ತು ಐಟಿ ದಾಳಿ ನಡೆದಿದೆ. ಆದರೆ ಬಿಜೆಪಿಯ ಒಬ್ಬರೇ ಒಬ್ಬರ ಮೇಲೆ ದಾಳಿ ನಡೆದಿಲ್ಲ. ಹಾಗಾದರೆ ಬಿಜೆಪಿಯವರೇನು ಸಚ್ಛಾರಿತ್ರ್ಯರೆ ? ಸದ್ಗುಣ ಸಂಪನ್ನರೆ ? ಇಡಿಯವರ ಪ್ರಕಾರ ಆಪರೇಷನ್ ಕಮಲದಲ್ಲಿ ಕೈ ಬದಲಾದ ಸಾವಿರಾರು ಕೋಟಿ ಹಣ ಅಕ್ರಮ ಸಂಪತ್ತಲ್ಲವೆ ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಆಳುವ ಸರ್ಕಾರದ ಕೈಗೊಂಬೆಯಾಗಿ ದ್ವೇಷದ ಸಾಧನವಾಗಿರುವ ಇಡಿ ಸಾಂವಿಧಾನಿಕ ಸಂಸ್ಥೆ ಎಂದು ಕರೆಸಿಕೊಳ್ಳುವ ಅರ್ಹತೆಯೇ ಇಲ್ಲ. ಆಳುವ ಸರ್ಕಾರವೊಂದು ಸಾಂವಿಧಾನಿಕ ಸಂಸ್ಥೆಗಳನ್ನು ಇಷ್ಟು ಕೀಳುಮಟ್ಟದಲ್ಲಿ ದುರುಪಯೋಗಿಸಿಕೊಂಡ ಉದಾಹರಣೆ ಇತಿಹಾಸದಲ್ಲೇ ಇಲ್ಲ. ಬಿಜೆಪಿಯ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ. ಇದನ್ನು ಪ್ರಜ್ಞಾವಂತ ಸಮಾಜ ಖಂಡಿಸಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.