ಹೈದರಾಬಾದ್, ಜೂ 12 (DaijiworldNews/DB): ಪ್ರವಾದಿ ಮಹಮ್ಮದ್ ಅವರ ಬಗ್ಗೆ ವಾಟ್ಸಾಪ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತೆಲಂಗಾಣದ ಆದಿಲ್ಬಾದ್ ಪಟ್ಟಣದಲ್ಲಿ ಶನಿವಾರ ರಾತ್ರಿ ಪ್ರತಿಭಟನೆ ನಡೆದಿದೆ. ಈ ವೇಳೆ ಕಲ್ಲು ತೂರಾಟವೂ ನಡೆದಿದೆ.
ಇಲ್ಲಿನ ಪೊಲೀಸ್ ಠಾಣೆ ಮುಂಭಾಗ ರಾತ್ರಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ಕೆಲವರು ಠಾಣೆಯೊಳಗೆ ನುಗ್ಗಲು ಯತ್ನಿಸಿದ್ದು, ಕಲ್ಲು ತೂರಾಟವನ್ನೂ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಲಾಠಿ ಪ್ರಹಾರ ನಡೆಸಿ ಪೊಲೀಸರು ಚದುರಿಸಿದರು. ಕೆಲ ಸಮಯದವರೆಗೆ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದಯಕುಮಾರ್ ರೆಡ್ಡಿ, ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ವ್ಯಕ್ತಿ ವಿರುದ್ದಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 295ಎ (ದುರುದ್ದೇಶದ ಕೃತ್ಯ, ಅವಹೇಳನದ ಮೂಲಕ ಧಾರ್ಮಿಕ ಭಾವನೆಗೆ ದಕ್ಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರ ಆತನನ್ನು ಬಂಧಿಸಲಾಗುವುದು. ಶಾಂತಿ ಸುವ್ಯವಸ್ಥೆ ಕಾಪಾಡಲು ಜನ ಸಹಕರಿಸಬೇಕು. ಸೌಹಾರ್ದಕ್ಕೆ ಸಮಸ್ಯೆ ಉಂಟು ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ತಡೆಯುವ ಸಲುವಾಗಿ ಹೆಚ್ಚುವರಿ ಭದ್ರತಾ ಸಿಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.