ದಿಯೂ, ಜೂ 12 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದಾಗಿ ಭಾರತದ ಕೀರ್ತಿ ಪತಾಕೆ ವಿಶ್ವ ಮಟ್ಟದಲ್ಲಿ ಹಾರಾಡಲು ಸಾಧ್ಯವಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ದಿಯುನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಶನಿವಾರ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತವು ದೇಶದ ಪ್ರತಿಷ್ಠೆ ಹೆಚ್ಚಲು ಹೆಚ್ಚು ಶ್ರಮ ವಹಿಸಿದೆ ಎಂದರು.
ಕೊರೊನಾ ಲಸಿಕೆಯನ್ನು ನೀಡುವಲ್ಲಿಯೂ ದೇಶ ಉತ್ತುಂಗದ ಸಾಧನೆ ಮಾಡಿದೆ. ಈಗಾಗಲೇ ದೇಶದ 130 ಕೋಟಿ ಜನರು ಎರಡೂ ಡೋಸ್ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ. ಯಾವ ತಂತ್ರಜ್ಞಾನ ಉಪಯೋಗಿಸಿಕೊಂಡು ಇಂತಹ ಸಾಧನೆ ಮಾಡಲಾಗಿದೆ ಎಂದು ಹಲವು ದೇಶಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಕೇಳಿದ್ದರು ಎಂದರು.
ಆಕ್ಸಿಜನ್ ಕೊರತೆ ದೇಶದಲ್ಲಿ ತಲೆದೋರಿದಾಗ ಕೇವಲ ಒಂದೂವರೆ ತಿಂಗಳಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಿ ಕೊರತೆ ನೀಗಿಸುವಲ್ಲಿ ಸರ್ಕಾರ ಶ್ರಮ ವಹಿಸಿದೆ. ಆ ಮೂಲಕ ದೇಶದ ಜನತೆಯ ಪರ ಯಾವಾಗಲೂ ಸರ್ಕಾರ ಇರುತ್ತದೆ ಎಂದು ತೋರಿಸಿಕೊಟ್ಟಿದೆ ಎಂದವರು ತಿಳಿಸಿದರು.