ಮೈಸೂರು, ಜೂ 11 (DaijiworldNews/DB): ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು ಎಂದು ಪ್ರಶ್ನಿಸುವ ಸಂಸದ ಪ್ರತಾಪ್ ಸಿಂಹ ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಚರ್ಚೆಗೆ ಜೂನ್ 24ರ ಒಳಗೆ ದಿನಾಂಕ, ಸ್ಥಳ ನಿಗದಿಪಡಿಸಲಿ. ಅವರು ದಿನಾಂಕದೊಳಗೆ ಉತ್ತರಿಸದಿದ್ದಲ್ಲಿ ನಾನೇ ಅವರ ಕಚೇರಿಗೆ ಹೋಗಿ ಕೇಳುತ್ತೇನೆ. ಮಾಧ್ಯಮಗಳ ಎದುರೇ ಚರ್ಚೆ ನಡೆಯಲಿ ಎಂದರು.
ಸುಳ್ಳಿನಿಂದ ಮಾಡುವ ರಾಜಕಾರಣ ಹೆಚ್ಚು ವರ್ಷ ಬಾಳಿಕೆ ಬರುವುದಿಲ್ಲ. ಯಾರ ಅವಧಿಯಲ್ಲಿ ಮೈಸೂರಿಗೆ ಏನು ದೊರೆತಿದೆ ಎಂಬುದಕ್ಕೆ ನನ್ನ ಬಳಿ ದಾಖಲೆಗಳಿವೆ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಎರಡನೇ ಅಭ್ಯರ್ಥಿ ಪರಾಭವಗೊಳ್ಳಲು ನೇರ ಕಾರಣ ಜೆಡಿಎಸ್. ಬಿಜೆಪಿಯ ಬಿ ಟೀಂ ಆಗಿ ಆ ಪಕ್ಷ ಕೆಲಸ ಮಾಡುತ್ತಿದೆ. 350 ಕೋಟಿ ರೂ. ಸಾಲ ನೀಡಿರುವುದಾಗಿ ಪ್ರಮಾಣಪತ್ರದಲ್ಲಿ ತೋರಿಸಿರುವ ಜೆಡಿಎಸ್ನ ಪರಾಭವಗೊಂಡ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ದೇವೇಗೌಡ ಕುಟುಂಬದವರಿಗೂ ಸಾಲ ಕೊಟ್ಟಿರುವುದಾಗಿ ಹೇಳಿದ್ದಾರೆ. ಏಪ್ರಿಲ್ನಲ್ಲಿ 19.08 ಕೋಟಿ ರೂ. ಸಾಲ ಕೊಡಲು ಕಾರಣವೇನೆಂದು ಬಹಿರಂಗಪಡಿಸಲಿ ಎಂದವರು ಇದೇ ವೇಳೆ ಸವಾಲೆಸೆದರು.
ಜಾತ್ಯಾತೀತ ಪದ ಬಳಸುವ ನೈತಿಕತೆ ಜೆಡಿಎಸ್ನವರಿಗಿಲ್ಲ. ಅವರಿಗೆ ನೈತಿಕತೆ ಇದ್ದಿದ್ದರೆ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕರಿಸಬಹುದಿತ್ತಲ್ಲವೇ ಎಂದು ಇದೇ ವೇಳೆ ಎಂ. ಲಕ್ಷ್ಮಣ ಪ್ರಶ್ನಿಸಿದರು.