ಲಖನೌ, ಜೂ 11 (DaijiworldNews/DB): ಪ್ರವಾದಿ ಕುರಿತ ಹೇಳಿಕೆ ವಿರೋಧಿಸಿ ಕಾನ್ಫರದಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ತೊಡಗಿದವರ ಮನೆಗಳನ್ನು ಉತ್ತರ ಪ್ರದೇಶ ಸರ್ಕಾರ ಬುಲ್ಡೋಸರ್ನಲ್ಲಿ ನೆಲಸಮಗೊಳಿಸುವ ಕೆಲಸ ಮಾಡಿದೆ. ಹಿಂಸಾಚಾರ ನಡೆದ ಒಂದು ದಿನದಲ್ಲೇ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಪ್ರವಾದಿ ಕುರಿತು ಬಿಜೆಪಿ ನಾಯಕಿ ನೂಪುರ್ ಶರ್ಮ ಅವರ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಶುಕ್ರವಾರ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಉತ್ತರಪ್ರದೇಶದ ಕಾನ್ಪುರದಲ್ಲಿ ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಹಿಂಸಾತ್ಮಕ ಘರ್ಷಣೆ ಮತ್ತು ಕಲ್ಲು ತೂರಾಟಗಳು ನಡೆದಿದ್ದವು. ಹಿಂಸಾತ್ಮಕ ಕೃತ್ಯದಲ್ಲಿ ತೊಡಗಿದ್ದ ಆರೋಪಿಗಳ ಮನೆಗಳನ್ನು ಶನಿವಾರ ಯೋಗಿ ಸರ್ಕಾರ ಬುಲ್ಡೋಸರ್ ಮೂಲಕ ನೆಲಸಮ ಮಾಡುವ ಕೆಲಸಕ್ಕೆ ಮುಂದಾಗಿದೆ.
ಘರ್ಷಣೆಗೆ ಕಾರಣರಾದವರ ಮನೆಗಳನ್ನು ಕೆಡವಲು ಕಾನ್ಪುರದ ಬೀದಿಗಳಲ್ಲಿ ಶನಿವಾರ ಬುಲ್ಡೋಸರ್ಗಳು ಬರಲಿವೆ. ಶುಕ್ರವಾರದ ನಂತರ ಶನಿವಾರ ಬರುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಮೃತ್ಯುಂಜಯ್ ಕುಮಾರ್ ಅವರು ಶನಿವಾರ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದರು.
ಪ್ರಯಾಗ್ರಾಜ್, ಸಹರಾನ್ಪುರ, ಬಿಜ್ನೋರ್, ಮೊರಾದಾಬಾದ್, ರಾಂಪುರ ಮತ್ತು ಲಕ್ನೋದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 230ಕ್ಕೂ ಹೆಚ್ಚು ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.