ಮೈಸೂರು, ಜೂ 11 (DaijiworldNews/DB): ಬಿಜೆಪಿಯವರು ಬಳಸಿದ ಚಡ್ಡಿಗಳನ್ನು ಕೆಪಿಸಿಸಿ ಕಚೇರಿಗೆ ಕಳುಹಿಸುತ್ತಿದ್ದಾರೆ. ಅದನ್ನು ನಾವು ಪ್ರಧಾನಿ ಮೋದಿಯವರಿಗೆ ಕಳುಹಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ನಾವು ಆರೆಸ್ಸೆಸ್ ಚಡ್ಡಿ ಬಗ್ಗೆ ಮಾತನಾಡುತ್ತೇವೆ. ಆದರೆ ಬಿಜೆಪಿಯವರು ತಮ್ಮ ಬುಡಕ್ಕೆ ಬೆಂಕಿ ಬಿದ್ದಂತೆ ಆಡುತ್ತಾರೆ. ಅವರು ಬೀದರ್ನಿಂದ ಚಾಮರಾಜನಗರದವರೆಗೂ ಚಡ್ಡಿ ಸಂಗ್ರಹ ಅಭಿಯಾನ ನಡೆಸಲಿ. ಆದರೆ ಮುಂದೆ ಜನರೇ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಅವರು ಕಳುಹಿಸಿದ ಎಲ್ಲಾ ಚಡ್ಡಿಗಳನ್ನು ಪ್ರಧಾನಿಗೆ ರವಾನಿಸಲಾಗುವುದು ಎಂದರು.
ಪ್ರಗತಿಪರ ಮನೋಭಾವ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆರೆಸ್ಸೆಸ್ ಹೇಳಿದಂತೆ ಕುಣಿಯುತ್ತಿದ್ದಾರೆ. ಹಾಗಾದರೆ ಸ್ವಂತ ನಿರ್ಧಾರ ಕೈಗೊಳ್ಳುವಲ್ಲಿ ಅವರು ಅಷ್ಟೊಂದು ಅಸಹಾಯಕರಾಗಿದ್ದಾರೆಯೇ ಎಂದು ಪ್ರಶ್ನಿಸಿದರು.
ಪಠ್ಯಪುಸ್ತಕದಲ್ಲಿ ಸುಳ್ಳು ತುಂಬಿ ಮಕ್ಕಳ ಭವಿಷ್ಯ ಹಾಳು ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಮನಸ್ಮೃತಿಯನ್ನು ಪಠ್ಯದಲ್ಲಿ ತುಂಬುತಿದ್ದಾರೆ. ವೈಜ್ಞಾನಿಕ ಮನೋಭಾವವನ್ನು ತೊಡೆದು ಹಾಕುವುದು ಸಲ್ಲ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ತಯಾರಿಸಿದ ಪಠ್ಯಪುಸ್ತಕದ ಬದಲು ಹಳೆಯದನ್ನೇ ಮುಂದುವರಿಸಿ ಮಕ್ಕಳು ಸತ್ಯವನ್ನು ಓದಲು ಅವಕಾಶ ಕಲ್ಪಿಸಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.