ಶಿವಮೊಗ್ಗ, ಜೂ 11 (DaijiworldNews/DB): ಬಿಜೆಪಿಯ ಮೂರನೇ ಅಭ್ಯರ್ಥಿಯ ಗೆಲುವಿಗೆ ಸಹಕರಿಸಿದ ಸಿದ್ದರಾಮಯ್ಯ ಅವರಿಗೆ ತುಂಬಾ ಥ್ಯಾಂಕ್ಸ್ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಕಾಂಗ್ರೆಸ್ನ ಮನ್ಸೂರ್ ಅಲಿಖಾನ್, ಜೆಡಿಎಸ್ನ ಕುಪೇಂದ್ರ ರೆಡ್ಡಿ ಅವರ ಸೋಲಿನಲ್ಲಿ ಸಿದ್ದರಾಮಯ್ಯ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಮೂಲಕ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರ ಗೆಲುವಿಗೆ ಸಹಕರಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಹೇಳಲೇಬೇಕು ಎಂದರು.
ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸ್ ಕಳಕಳಿ ಏನೆಂಬುದು ಈ ಚುನಾವಣೆಯಲ್ಲಿ ಗೊತ್ತಾಗಿದೆ. ಸೋಲು ಖಚಿತ ಎಂಬುದು ತಿಳಿದಿದ್ದರೂ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕಿಳಿಸಿ ಅಲ್ಪಸಂಖ್ಯಾತರ ಮೇಲಿನ ಕಾಳಜಿ ಕೇವಲ ನಾಟಕ ಎಂಬುದನ್ನು ಆ ಪಕ್ಷ ತೋರಿಸಿಕೊಟ್ಟಿದೆ. ಬಿಜೆಪಿಯನ್ನು ಕೋಮುವಾದಿ ಎನ್ನುವ ಮುಸ್ಲಿಮರು, ಪ್ರಗತಿಪರರು ಇದನ್ನು ತಿಳದಿಕೊಳ್ಳಬೇಕು ಎಂದವರು ತಿಳಿಸಿದರು.
ಬಿಜೆಪಿ ನನ್ನನ್ನು ಸಾಮಾನ್ಯ ಕಾರ್ಯಕರ್ತನಿಂದ ಉಪ ಮುಖ್ಯಮಂತ್ರಿಯವರೆಗೂ ಬೆಳೆಯಲು ಅವಕಾಶ ಕಲ್ಪಿಸಿದೆಯೇ ಹೊರತು ಸಿದ್ದರಾಮಯ್ಯ ಅವರ ಕೃಪಾಕಟಾಕ್ಷದಿಂದಲ್ಲ. ಕಾಂಗ್ರೆಸ್ ಕೋಮುವಾದಿಯಾಗಿ ನಡೆದುಕೊಳ್ಳುತ್ತಿದೆ. ಅದೊಂದು ರಾಷ್ಟ್ರದ್ರೋಹಿ ಪಕ್ಷವಾಗಿದೆ ಎಂದು ಕಾಂಗ್ರೆಸ್ ವಿರುದ್ದ ಅವರು ವಾಗ್ದಾಳಿ ನಡೆಸಿದರು.