ದೆಹಲಿ, ಜೂ 11 (DaijiworldNews/DB): ದೆಹಲಿಯ ರೋಹಿಣಿ ಪ್ರದೇಶದ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ಬೆಂಕಿ ಆಕಸ್ಮಿಕಕ್ಕೆ 64 ವರ್ಷದ ವೃದ್ದ ರೋಗಿಯೊಬ್ಬರು ಬಲಿಯಾಗಿದೆ.
ಪೂತ್ ಖುರ್ದ್ನ ಬ್ರಹ್ಮ ಶಕ್ತಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅವಘಡ ಸಂಭವಿಸಲು ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರಿಂದಾಗಿ ಆಮ್ಲಜನಕ ವ್ಯವಸ್ಥೆಗೆ ಅಡ್ಡಿಯಾಗಿದೆ. ಮಾಹಿತಿ ತಿಳಿದ ತತ್ಕ್ಷಣ ಒಂಬತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ರೋಹಿಣಿ) ಪ್ರಣವ್ ತಯಾಲ್ ಮತ್ತು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್ಎಸ್) ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.
ಘಟನೆಯಲ್ಲಿ ಓರ್ವ ರೋಗಿ ಸಾವನ್ನಪ್ಪಿದ್ದು, ಉಳಿದ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪ್ರೇಮ್ನಗರ ನಿವಾಸಿ ಹೋಳಿ ಅವರು ಆಮ್ಲಜನಕದ ಬೆಂಬಲದಲ್ಲಿ ಉಂಟಾದ ಅಡಚಣೆಯಿಂದಾಗಿ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡ ರೋಗಿಯೊಬ್ಬರನ್ನು ಐಸಿಯುಗೆ ದಾಖಲಿಸಿ ವೆಂಟಿಲೇಟರ್ನಲ್ಲಿ ಇರಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 285 (ಬೆಂಕಿ ಅಥವಾ ದಹನಕಾರಿ ವಸ್ತುಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ನಡವಳಿಕೆ), 287 (ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ), ಮತ್ತು 304A (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಆಸ್ಪತ್ರೆ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.