ದಾವಣಗೆರೆ, ಜೂ 11 (DaijiworldNews/DB): ಸಿಎಂ ಆಗಲು ಯೋಗ, ಯೋಗ್ಯತೆ ಎರಡೂ ಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆ ಮುಗಿದಿದ್ದು, ಮುಂದೆ ಸಂಪುಟ ವಿಸ್ತರಣೆ ಆಗಬಹುದು, ಅಲ್ಲದೆ ಯೋಗ ಇದ್ದವರು ಸಿಎಂ ಆಗಲೂಬಹುದು. ಆದರೆ ಯೋಗ್ಯತೆ, ಜನರು ಮತ್ತು ಹೈಕಮಾಂಡ್ ಆಶೀರ್ವಾದ ತೀರಾ ಅಗತ್ಯ ಎಂದರು.
ದೇಶಾದ್ಯಂತ ಯಾರದೋ ಕುಮ್ಮಕ್ಕಿನಿಂದ ಮುಸ್ಲಿಮರು ಪ್ರತಿಭಟನೆಗಿಳಿದಿದ್ದಾರೆ. ವಿವಾದಾತ್ಮಕ ಹೇಳಿಕೆ ಕೊಟ್ಟು 15 ದಿನಗಳಾದ ಬಳಿಕ ಪ್ರತಿಭಟನೆಗಿಳಿದು ಸಾರ್ವಜನಿಕ ಆಸ್ತಿ ಹಾನಿ ಮಾಡುವುದು ಸರಿಯಲ್ಲ. ಕಾನೂನು ಇದೆ. ಅಲ್ಲಿ ಪ್ರಶ್ನೆ ಮಾಡಲು ಅವಕಾಶವಿತ್ತು. ಅದು ಬಿಟ್ಟು ಸಂಚು ನಡೆಸಿ ಸೌಹಾರ್ದ ಕೆಡಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪಠ್ಯಪುಸ್ತಕ ವಿವಾದವನ್ನೇ ಹಿಡಿದುಕೊಂಡು ಪ್ರತಿಭಟನೆ, ಹೇಳಿಕೆ ನೀಡುವುದು ಬಿಟ್ಟರೆ ಕಾಂಗ್ರೆಸ್ನವರಿಗೆ ಬೇರೆ ವಿಷಯವೇ ಇಲ್ಲ ಎಂದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಹಲವರು ಬಿಜೆಪಿಗೆ ಬರುವವರಿದ್ದಾರೆ. ಆ ಪಕ್ಷಗಳಲ್ಲಿ ಪ್ರೀತಿ ಕಡಿಮೆಯಾದ ಮೇಲೆ ಅಲ್ಲಿ ಉಳಿಯುವವರು ಇಲ್ಲ. ಈಗಾಗಲೇ ಮೋದಿ, ಬೊಮ್ಮಾಯಿ ಆಡಳಿತದ ಕಾರಣದಿಂದ ರಾಜ್ಯಸಭೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ ಎಂದರು.