ಕೋಲ್ಕತ್ತಾ, ಜೂ 11 (DaijiworldNews/DB): ಬಿಜೆಪಿಯಿಂದಾಗಿ ಹೌರಾ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದೆ. ಗಲಭೆಗಳಿಗೆ ಪ್ರಚೋದನೆ ನೀಡಲು ಯತ್ನಿಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಗಲಭೆ ಹಿಂದೆ ಕೆಲವು ರಾಜಕೀಯ ಪಕ್ಷಗಳ ಕುಮ್ಮಕ್ಕು ಇರುವುದು ಸ್ಪಷ್ಟ. ಯಾರೇ ಗಲಭೆ ಎಬ್ಬಿಸಲು ಪ್ರಯತ್ನಿಸಿದರೂ ಅಂತಹವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಬಿಜೆಪಿ ಮಾಡಿದ ಪಾಪಕ್ಕೆ ಜನಸಾಮಾನ್ಯರು ನರಳಾಡುವಂತೆ ಆಗಬಾರದು ಎಂದರು.
ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಪ್ರಚೋದನಕಾರಿ ಹೇಳಿಕೆ ವಿರುದ್ದ ಹೌರಾ ಜಿಲ್ಲೆಯ ವಿವಿಧೆಡೆ ಶುಕ್ರವಾರ ಪ್ರತಿಭಟನೆ ನಡೆದಿದ್ದು, ಹೌರಾದಲ್ಲಿ ಗಲಭೆ ಉಂಟಾಗಿತ್ತು. ಗಲಭೆ ಹಿನ್ನೆಲೆಯಲ್ಲಿ ಇಲ್ಲಿ ಇಂಟರ್ನೆಟ್ ಸೇವೆಗಳನ್ನು ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ. ಹೌರಾದ ಉಲುಬೇರಿಯಾ-ಉಪ ವಿಭಾಗದ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ನಿಲ್ದಾಣಗಳ ವ್ಯಾಪ್ತಿಯಲ್ಲಿ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 144 ಜೂನ್ 15 ರವರೆಗೆ ಹಾಕಲಾಗಿದೆ. ಅಲ್ಲದೆ ಜೂ. 15ರವರೆಗೂ ಸೆಕ್ಷನ್ ಮುಂದುವರಿಯಲಿದೆ ಎಂದು ಗೃಹ ಮತ್ತು ಗುಡ್ಡಗಾಡು ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ.