ಪ್ರಯಾಗರಾಜ್ (ಉತ್ತರ ಪ್ರದೇಶ), ಜೂ 11 (DaijiworldNews/DB): ಪ್ರವಾದಿ ಮಹಮ್ಮದ್ ಅವರ ಬಗ್ಗೆ ಬಿಜೆಪಿಯ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರ ವಿವಾದಾತ್ಮಕ ಹೇಳಿಕೆ ಖಂಡಿಸಿ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಘಟಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜಾವೇದ್ ಅಹಮ್ಮದ್ ಅಲಿಯಾಸ್ ಜಾವೇದ್ ಪಂಪ್ ಎಂದು ಗುರುತಿಸಲಾಗಿದೆ. ಘಟನೆಯ ಹಿಂದೆ ಇನ್ನೂ ಹಲವರು ಇದ್ದು, ಶೀಘ್ರ ಅವರನ್ನು ಬಂಧಿಸಲಾಗುವುದು. ಕಾನೂನು ಕೈಗೆತ್ತಿಕೊಳ್ಳುವ ಯಾರನ್ನೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಪ್ರಯಾಗರಾಜ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ. ಆರೋಪಿಗಳೆಲ್ಲರ ವಿರುದ್ದ ಗೋಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಅವರ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಪೊಲೀಸರು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದಾರೆ.
ಪ್ರತಿಭಟನೆ ನಡೆಯುತ್ತಿದ್ದ ವೇಳೆ ಅಟಾಲಾದಲ್ಲಿ ಉದ್ರಿಕ್ತರು ಪೊಲೀಸ್ ಠಾಣೆಗೆ ಕಲ್ಲೆಸೆದು ಬೆಂಕಿ ಹಚ್ಚಿದ್ದರು. ದೆಹಲಿಯಲ್ಲಿನ ಗಲಭೆಗೆ ಬಂಧಿತ ಆರೋಪಿ ಜಾವೀದ್ ಅಹಮ್ಮದ್ನ ಮಗಳು ಸಹಕರಿಸಿದ್ದಾಳೆ. ಈಕೆಯ ಬಂಧನಕ್ಕೆ ಪೊಲೀಸರ ತಂಡವನ್ನು ದೆಹಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಯವರು ವಿವರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.