ಮಧ್ಯಪ್ರದೇಶ, ಜೂ 11 (DaijiworldNews/DB): ತಡರಾತ್ರಿಯಲ್ಲೂ ಮೊಬೈಲ್ನಲ್ಲಿ ಮಾತನಾಡುತ್ತಿರುವುದನ್ನು ವಿರೋಧಿಸಿದ್ದಕ್ಕಾಗಿ ಸೊಸೆಯೊಬ್ಬಳು ಅತ್ತೆಯನ್ನು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ.
ತಾಯಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೃತಳ ಮಗ ಅಜಯ್ ಬರ್ಮನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಪರಿಶೀಲಿಸಿದಾಗ ಮೃತದೇಹದಲ್ಲಿ ಗಾಯದ ಗುರುತುಗಳಿರುವುದು ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಸೊಸೆಯೇ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಆಕೆ ಬಾಯ್ಬಿಟ್ಟಿಲ್ಲವಾದರೂ ತೀವ್ರ ವಿಚಾರಣೆಗೊಳಪಡಿಸಿದಾಗ ಅತ್ತೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮೊಬೈಲ್ ಫೋನ್ ಬಳಕೆ ಬಗ್ಗೆ ಅತ್ತೆ ತನ್ನ ಪತಿಗೆ ದೂರು ನೀಡುತ್ತಿದ್ದಳು. ರಾತ್ರಿ ಮೊಬೈಲ್ನಲ್ಲಿ ಮಾತನಾಡಿದ್ದನ್ನು ಕೆಲ ದಿನಗಳ ಹಿಂದೆ ಹೇಳಿದ್ದಳು. ಇದರಿಂದಾಗಿ ಸೊಸೆಯ ಮೊಬೈಲ್ ಫೋನ್ನ್ನು ಆಕೆಯ ಪತಿ ಕಿತ್ತುಕೊಂಡಿದ್ದ. ಇದರಿಂದ ಆಕ್ರೋಶಿತಳಾದ ಆಕೆ ಅತ್ತೆಯ ತಲೆ ಒಡೆದು ಕೊಂದಿದ್ದಾಳೆ. ಬಳಿಕ ತನ್ನ ಮೇಲೆ ಅನುಮಾನ ಬಾರದಿರುವಂತೆ ಕಥೆ ಹೆಣೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.