ಬೆಂಗಳೂರು, ಜೂನ್ 11 (DaijiworldNews/MS): 'ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೂಪುರ್ ಶರ್ಮಾ ಹೇಳಿಕೆ ನೀಡಿರುವುದನ್ನು ಖಂಡಿಸಿ ದೇಶದ ಕೆಲವೆಡೆ ಪ್ರತಿಭಟನೆ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕರ್ನಾಟಕ ಶಾಂತಿಪ್ರಿಯ ರಾಜ್ಯ. ಶಾಂತಿ ಕದಡುವಂತಹ ಕ್ರಮಗಳನ್ನು ಬಿಟ್ಟು ಸೌಹಾರ್ದತೆ ಕಾಪಾಡುವುದು ಒಳ್ಳೆಯದು," ಎಂದು ಎಲ್ಲಾ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.
ಅಲ್ಲದೆ ದೇಶವ್ಯಾಪ್ತಿ ಶುಕ್ರವಾರ ನಡೆದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ ಕಾಪಾಡಲು ಕ್ರಮ ವಹಿಸಲಾಗಿದೆ. ಇಂದು ಡಿಜಿಪಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಗೃಹ ಇಲಾಖೆ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಲಾಗಿದ್ದು, ಕರ್ನಾಟಕದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಶಾಂತಿ ಸೌಹಾರ್ದತೆಯನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಲು ಪ್ರತಿಯೊಂದು ಪೊಲೀಸ್ ಠಾಣೆಗೆ ಸೂಚನೆಯನ್ನು ನೀಡಬೇಕು. ಎಲ್ಲ ಸಮುದಾಯದವರ ಜತೆ ಸೌಹಾರ್ದಯುತ ವಾತಾವರಣ ನಿರ್ಮಿಸುವಂತೆ ಸೂಚಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿಗಳು ಸಂಬಂಧಿಸಿದವರೊಂದಿಗೆ ಮಾತನಾಡಿ ಕೆ.ಎಸ್.ಆರ್.ಪಿ ತುಕಡಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಬೇಕು ಮತ್ತು ಹಿರಿಯ ಅಧಿಕಾರಿಗಳು ಈ ಬಗ್ಗೆ ಜವಾಬ್ದಾರಿಯನ್ನು ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಸಂಪೂರ್ಣ ಶಾಂತಿ ಸುವ್ಯವಸ್ಥೆಯ ಜೊತೆಗೆ ಕಾನೂನು ಸುವ್ಯವಸ್ಥೆಯ ನೆಲಸಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.