ಜಾಂಜ್ಗಿರ್, ಜೂ 11 (DaijiworldNews/DB): 11 ವರ್ಷದ ಬಾಲಕನೊಬ್ಬ 80 ಅಡಿ ಆಳದ ಬೋರ್ವೆಲ್ಗೆ ಬಿದ್ದ ಘಟನೆ ಛತ್ತೀಸ್ಗಢದ ಜಂಜ್ಗಿರ್-ಚಂಪಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಶುಕ್ರವಾರ ನಡೆದಿದೆ.
ಬಾಲಕನನ್ನು ರಾಹುಲ್ ಸಾಹು ಎಂದು ಗುರುತಿಸಲಾಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಬಾಲಕ ಆಟವಾಡುತ್ತಿದ್ದ ವೇಳೆ ಮಲ್ಖರೋಡಾ ಡೆವಲಪ್ಮೆಂಟ್ ಬ್ಲಾಕ್ನಲ್ಲಿರುವ ಪಿಹ್ರಿದ್ ಗ್ರಾಮದ ತನ್ನ ಮನೆಯ ಹಿತ್ತಲಿನಲ್ಲಿದ್ದ ಬೋರ್ವೆಲ್ನೊಳಗೆ ಬಿದ್ದಿದ್ದಾನೆ. ತುಂಬಾ ಸಮಯವಾದರೂ ಬಾಲಕ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ರಾಹುಲ್ ಬೋರ್ವೆಲ್ ಒಳಗಿನಿಂದ ಅಳುವ ಸದ್ದು ಕೇಳಿಸಿದೆ. ಕೂಡಲೆ ಮನೆಯವರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸಂದೇಶ ರವಾನೆಯಾಗಿದೆ. ಸಂಜೆ 4 ಗಂಟೆ ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಬೋರ್ವೆಲ್ನೊಳಗೆ ಆಮ್ಲಜನಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸ್ಥಳದಲ್ಲಿ ವೈದ್ಯರನ್ನು ಕೂಡಾ ನಿಯೋಜಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.