ನವದೆಹಲಿ, ಜೂ 10 (DaijiworldNews/DB): ಪ್ರವಾದಿ ಮಹಮ್ಮದ್ ವಿರುದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ ದೇಶಾದ್ಯಂತ ಮುಸ್ಲಿಮರು ಹಮ್ಮಿಕೊಂಡ ಪ್ರತಿಭಟನೆ ಕುರಿತು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಭಾರತದಂತೆ ಕಾಶ್ಮೀರ ಇರಬೇಕೆಂದು ಅಪೇಕ್ಷೆ ಮಾಡಿದ್ದೆವು. ಆದರೆ ಇಡೀ ಭಾರತ ಇಂದು ಕಾಶ್ಮೀರದಂತೆ ಕಾಣುತ್ತಿದೆ ಎಂದು ಟ್ವೀಟ್ ಮೂಲಕ ಸ್ವಾಮಿ ಹೇಳಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಏನಾದರೂ ಪರಿಹಾರ ಇದೆಯೇ? 48 ಗಂಟೆಯೊಳಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಅವರು ಗೃಹಸಚಿವರಾಗಿ ಮುಂದುವರಿಯಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಇವೆಲ್ಲವೂ ಪ್ರಧಾನಿ ಮೋದಿ ಅವರಿಗೆ ಬಿಟ್ಟ ವಿಷಯವಾಗಿದೆ ಎಂದೂ ಹೇಳಿದ್ದಾರೆ.
ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರನ್ನು ಬಂಧಿಸುವಂತೆ ಆಗ್ರಹಿಸಿ ದೇಶದ ಹಲವೆಡೆ ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆಗಳು ನಡೆದವು.