ಇಡುಕ್ಕಿ (ಕೇರಳ), ಜೂ 10 (DaijiworldNews/DB): ಪ್ರೀತಿಸಿದ ಯುವಕ ಕೈಕೊಟ್ಟ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಯುವತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ಮನಃಪರಿವರ್ತಿಸಿ ಪ್ರಾಣ ಉಳಿಸಿದ ಪ್ರಸಂಗ ಕೇರಳದ ಇಡುಕ್ಕಿಯಲ್ಲಿ ನಡೆದಿದೆ. ಪೊಲೀಸ್ ಇನ್ಸ್ಪೆಕ್ಟರ್ ಕಾರ್ಯಕ್ಕೆ ಇದೀಗ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
26 ವರ್ಷದ ಆದಿವಾಸಿ ಯುವತಿ ಅಳುತ್ತಾ ಬರಿಗಾಲಿನಲ್ಲಿ ಬೆಟ್ಟದ ಕಡೆಗೆ ಹೋಗುತ್ತಿರುವುದನ್ನು ಕಂಡ ದಾರಿಹೋಕು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕರೆ ಸ್ವೀಕರಿಸಿದ ಠಾಣಾಧಿಕಾರಿ ಸುಧೀರ್ ಕೂಡಲೇ ಸಬ್ ಇನ್ಸ್ಪೆಕ್ಟರ್ ಕೆ.ಎಂ. ಸಂತೋಷ್ಗೆ ವಿಷಯ ತಿಳಿಸಿದರು. ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬಂದಿಗೆ ತತ್ಕ್ಷಣ ಕರೆ ಮಾಡಿದ ಸಂತೋಷ್ ಅವರು ಬರುವುದನ್ನು ಕಾಯದೆ ಸೀದಾ ಯುವತಿಯನ್ನು ಹಿಂಬಾಲಿಸಿ ಹೋದರು. ಆಕೆಯನ್ನು ಕೂಗಿ ಕರೆದು ಬುದ್ದಿ ಮಾತು ಹೇಳಿದರೂ ಕೇಳದ ಆಕೆ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆಂದು ಮತ್ತಷ್ಟು ವೇಗದಲ್ಲಿ ಹೋದಳು. ಕೂಡಲೇ ಕೂಗಿದ ಸಂತೋಷ್, ನೋಡಮ್ಮಾ ನನಗೂ ನಿನ್ನಂತೆಯೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಿಗೇನಾದರೂ ಆದರೆ ಅಪ್ಪನಾದ ನನ್ನ ಸ್ಥಿತಿ ಹೇಗಿರಬಹುದು. ಅದೇ ಪರಿಸ್ಥಿತಿ ನಿನ್ನ ಪೋಷಕರದ್ದೂ ಅಲ್ಲವೇ ಎಂದು ಹೇಳಿದ್ದಾರೆ.
ಅಲ್ಲದೆ ನೀನು ಸಾಯುವುದರಿಂದ ನಿನ್ನ ಹೆತ್ತವರಿಗೆ ನೋವೇ ಹೊರತು, ನಿನಗೆ ನಿಜವಾಗಿಯೂ ನೋವು ಮಾಡಿದರವರಿಗೆ ಏನೂ ಸಮಸ್ಯೆ ಆಗುವುದಿಲ್ಲ. ಸಾಯುವುದರಿಂದ ಏನು ಸಾಧಿಸುತ್ತೀಯಾ ಎಂದು ಪ್ರಶ್ನಿಸಿದ್ದಾರೆ. ಅವಮಾನ ಮಾಡಿದವರೆದುರು ತಲೆ ಎತ್ತಿ ಬದುಕಬೇಕು. ಹೇಡಿಯಂತೆ ಸಾಯಲು ಹೊರಟರೆ ಅವಮಾನ ಮಾಡಿದವರೇ ಗೆಲುವು ಸಾಧಿಸುತ್ತಾರೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂತೋಷ್ ಹೇಳಿದ್ದಾರೆ. ಇದರಿಂದ ಯುವತಿಯ ಮನಃಪರಿವರ್ತನೆಯಾಗಿದ್ದು, ಆಕೆ ತನ್ನ ನಿರ್ಧಾರ ಬದಲಿಸಿದ್ದಾಳೆ. ಬಳಿಕ ಹಲವು ವರ್ಷಗಳಿಂದ ಪ್ರೀತಿಸಿದ ಯುವಕ ತನಗೆ ಮೋಸ ಮಾಡಿದ ಕಾರಣ ಸಾಯುವ ನಿರ್ಧಾರ ತೆಗೆದುಕೊಂಡೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಯುವತಿಯ ಮನಃಪರಿವರ್ತನೆ ಮಾಡಿದ ಪೊಲೀಸ್ ಸಂತೋಷ್ ಅವರ ಕಾರ್ಯಕ್ಕೆ ಇದೀಗ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ.