ಬೆಳಗಾವಿ, ಜೂ 10 (DaijiworldNews/DB): ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರ ಪ್ರತಿಕೃತಿಯನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸುವ ರೀತಿಯಲ್ಲಿ ನೇತುಹಾಕಿ ವಿಕೃತಿ ಮೆರೆದ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿ ಗುರುವಾರ ರಾತ್ರಿ ನೂಪುರ್ ಶರ್ಮಾ ಪ್ರತಿಕೃತಿಯನ್ನು ನೇತು ಹಾಕಲಾಗಿದ್ದು, ಇದಕ್ಕೆ ನೂಪೂರ್ ಶರ್ಮಾರ ಫೋಟೋಗಳನ್ನು ಅಂಟಿಸಲಾಗಿದೆ. ಅಲ್ಲದೆ ರಸ್ತೆಯ ಎರಡೂ ಬದಿಯ ಕಟ್ಟಡಗಳಿಗೆ ದಾರ ಕಟ್ಟಿ ಪ್ರತಿಕೃತಿ ನೇತು ಹಾಕಲಾಗಿದೆ. ಪ್ರತಿಕೃತಿಗೆ ಕೇಸರಿ ಬಣ್ಣದ ಸೀರೆ ಉಡಿಸಲಾಗಿತ್ತು. ಪೊಲೀಸರು ಶುಕ್ರವಾರ ಬೆಳಗ್ಗೆ ಇದನ್ನು ನೋಡಿ ತತ್ಕ್ಷಣ ಪ್ರತಿಕೃತಿಯನ್ನು ಕೆಳಗಿಳಿಸಿದ್ದು, ಕೃತ್ಯ ಎಸಗಿರುವವರ ಹುಡುಕಾಟದಲ್ಲಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿದುಕೊಂಡ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಜನ ಸೇರುತ್ತಿದ್ದಂತೆ ಬಿಗು ವಾತಾವರಣ ನಿರ್ಮಾಣವಾಯಿತು. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದರು.
ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ, ಇದು ಪ್ರಜಾಪ್ರಭುತ್ವ ದೇಶವೇ ಹೊರತು ತಾಲೀಬಾನ್ ಅಲ್ಲ. ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಪದ್ದತಿ ಇಲ್ಲಿ ಇಲ್ಲ. ಗಲ್ಲಿಗೇರಿಸುವ, ಶಿಕ್ಷೆ ನೀಡುವ ಅಧಿಕಾರ ಇರುವುದು ನ್ಯಾಯಾಂಗ ವ್ಯವಸ್ಥೆಗೆ ಮಾತ್ರ. ನೂಪುರ್ ಶರ್ಮಾ ಹೇಳಿಕೆಯಲ್ಲಿ ತಪ್ಪಿದ್ದರೆ ನ್ಯಾಯಾಂಗ ವ್ಯವಸ್ಥೆ ನೋಡಿಕೊಳ್ಳುತ್ತದೆ ಎಂದಿದ್ದಾರೆ.