ನವದೆಹಲಿ, ಜೂ 10 (DaijiworldNews/HR): ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿದಕ್ಕಾಗಿ ಈಗಾಗಲೇ ಬಿಜೆಪಿಯಿಂದ ಅಮಾನತುಗೊಂಡಿದ್ದು, ಅವರ ಬಂಧನಕ್ಕೆ ಒತ್ತಾಯಿಸಿ ದೆಹಲಿಯ ಜಾಮಾ ಮಸೀದಿ ಬಳಿ ಪ್ರತಿಭಟನೆ ನಡೆಸಲಾಗಿದೆ.
ಇಂದು ನಮಾಜ್ ಬಳಿಕ ಗುಂಪು ಸೇರಿದ ಸಾವಿರಾರು ಮುಸ್ಲಿಮರು ಘೋಷಣೆಗಳನ್ನು ಕೂಗುತ್ತಾ, ಭಿತ್ತಿ ಪತ್ರ ಪ್ರದರ್ಶಿಸಿ ನೂಪುರ್ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಇನ್ನು ದ್ವೇಷ ಹರಡುವಿಕೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದಡಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ವಿವಾದಿತ ಅರ್ಚಕ ಯತಿ ನರಸಿಂಗಾನಂದ್ ಸೇರಿ 31 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನೂಪುರ್ ಶರ್ಮಾ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ನವೀನ್ ಕುಮಾರ್ ಜಿಂದಾಲ್ ಮತ್ತು ಪತ್ರಕರ್ತೆ ಸಭಾ ನಖ್ವಿ ಅವರ ಹೆಸರುಗಳನ್ನೂ ಎಫ್ಐಆರ್ನಲ್ಲಿ ಸೇರಿಸಲಾಗಿದೆ.