ಉತ್ತರಪ್ರದೇಶ, ಜೂ 10 (DaijiworldNews/DB): ಹಣ ಮತ್ತು ಆಸ್ತಿ ವಿಚಾರವಾಗಿ ನಡೆದ ಜಗಳ ತಾರಕಕ್ಕೇರಿ ಸಹೋದರರಿಬ್ಬರು ಹೆತ್ತ ತಂದೆಯನ್ನೇ ಹತ್ಯೆ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಮಧುಬನ್ವಾ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಪರಶುರಾಮ್ ಎಂದು ಗುರುತಿಸಲಾಗಿದೆ. ಆತನ ಮಕ್ಕಳಾದ ರಾಜಾರಾಮ್ ಮತ್ತು ಸೋನು ಅವರೊಂದಿಗೆ ಜೂನ್ 4 ರಂದು ಮದ್ಯ ಮತ್ತು ಆಸ್ತಿಗಾಗಿ ಹಣ ಕೇಳಿ ಪರಶುರಾಮ್ ಖ್ಯಾತೆ ತೆಗೆದಿದ್ದನು. ಅಲ್ಲದೆ ಆಸ್ತಿ ಹಿಂತಿರುಗಿಸದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಇಬ್ಬರು ಮಕ್ಕಳಿಗೆ ಬೆದರಿಕೆ ಹಾಕಿ ಕೆಲಸಕ್ಕೆ ತೆರಳಿದ್ದನು. ಇದರಿಂದ ಆಕ್ರೋಶಗೊಂಡ ಮಕ್ಕಳಿಬ್ಬರು ತಂದೆಯನ್ನು ಹಿಂಬಾಲಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಪಕ್ಕದ ಚರಂಡಿಯಲ್ಲಿ ಹೂತಿದ್ದರು. ತಂದೆಯನ್ನು ಬೇರೆ ಊರಿಗೆ ಕಳುಹಿಸಿರುವುದಾಗಿ ತಾಯಿಯೊಂದಿಗೆ ಇಬ್ಬರೂ ಸುಳ್ಳು ಹೇಳಿದ್ದು, ಪತಿ ಹಲವು ದಿನಗಳಾದರೂ ಮನೆಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಆಕೆ ಪೊಲೀಸ್ ದೂರು ನೀಡಿದ್ದಾಳೆ. ಈ ವೇಳೆ ಪೊಲೀಸರು ತನಿಖೆ ನಡೆಸಿದಾಗ ಪುತ್ರರಿಬ್ಬರು ತಂದೆಯನ್ನು ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ಇಬ್ಬರೂ ಆರೋಪಿಗಳು ತಮ್ಮ ಅಪರಾಧವನ್ನು ವಿಚಾರಣೆಯ ಸಮಯದಲ್ಲಿ ಪೊಲೀಸರೆದುರು ಒಪ್ಪಿಕೊಂಡಿದ್ದು, ಮೃತದೇಹವಿರುವ ಸ್ಥಳವನ್ನೂ ತಿಳಿಸಿದ್ದಾರೆ. ಹೀಗಾಗಿ ನಾವು ಮೃತದೇಹ ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಯಶ್ವೀರ್ ಸಿಂಗ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಇಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದವರು ಹೇಳಿಕೆ ನೀಡಿದ್ದಾರೆ.