ಬೆಂಗಳೂರು, ಜೂ 10 (DaijiworldNews/DB): ಸರ್ಕಾರಿ ಆದೇಶವಿಲ್ಲದಿದ್ದರೂ ಕಿಡಿಗೇಡಿ ಟ್ರೋಲರ್ಗೆ ಪಠ್ಯ ಪರಿಷ್ಕರಣೆ ಅವಕಾಶ ನೀಡಿ, ಈಗ ಆತ ಮಾಡಿದ ಕೊಳಕನ್ನು ಸಮರ್ಥಿಸಿಕೊಳ್ಳುತ್ತಿರುವ ಶಿಕ್ಷಣ ಸಚಿವರನ್ನು ತತ್ಕ್ಷಣ ಸಂಪುಟದಿಂದ ವಜಾ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬೊಮ್ಮಾಯಿಯವರನ್ನು ಒತ್ತಾಯಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು, ಪಠ್ಯಪುಸ್ತಕ ಪರಿಷ್ಕರಣೆಯಿಂದಾಗಿ ರಾಜ್ಯದ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರ ಕಲುಷಿತಗೊಂಡಿದೆ. ಅದನ್ನು ಸಮರ್ಥಿಸಿಕೊಳ್ಳುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ತಪ್ಪಿದ್ದಲ್ಲಿ ಸಿಎಂ ರಾಜೀನಾಮೆ ನೀಡಬೇಕು. ಅಲ್ಲದೆ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥನನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಠ್ಯ ಪರಿಷ್ಕರಣೆಯೆಂಬುದು ಜವಾಬ್ದಾರಿಯುತ ಕೆಲಸ. ಆದರೆ ಸ್ವಭಾವತಃ ವಿಕೃತ, ಟ್ರೋಲರ್ಗೆ ಆ ಕೆಲಸ ಒಪ್ಪಿಸಿರುವುದೇ ದೊಡ್ಡ ಪ್ರಮಾದ. ಆತ ಮಾಡುವ ಅವಾಂತರಗಳಿಗೆ ಆತನೇ ಹೊಣೆ ಎಂದು ಅಧಿಕೃತ ಆದೇಶ ನೀಡಿದ್ದರೂ, ಈಗ ಅದನ್ನು ಸಮರ್ಥಿಸಿಕೊಳ್ಳುವ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಮೌಖಿಕ ಸೂಚನೆ ನೀಡಿ ಘಟನೋತ್ತರ ಅನುಮತಿ ನೀಡುವುದಕ್ಕೆ ಇದು ಶೇ. 40 ಕಮಿಷನ್ ಪಡೆಯುವ ರಸ್ತೆ ಕಾಮಗಾರಿಯಲ್ಲ. ಎಳೆ ಮಕ್ಕಳ ಭವಿಷ್ಯವನ್ನೇ ಕಸಿಯಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ್ಞಾನದೀವಿಗೆಗಳಾದ ಬಸವಣ್ಣ, ಅಂಬೇಡ್ಕರ್, ಜ್ಯೋತಿಬಾ ಪುಲೆ, ನಾರಾಯಣ ಗುರು, ಕೆಂಪೇಗೌಡ, ಕುವೆಂಪು, ಮಹರ್ಷಿ ವಾಲ್ಮೀಕಿಯನ್ನೂ ಆ ಅಧ್ಯಕ್ಷ ಮತ್ತವರ ಗ್ಯಾಂಗ್ ಅವಮಾನಿಸಿದೆ. ಹೀಗಾಗಿ ಆ ಅಧ್ಯಕ್ಷನನ್ನು ಬಂಧಿಸಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕು. ಅಲ್ಲದೆ, ಬರಗೂರು ರಾಮಚಂದ್ರಪ್ಪ ಸಮಿತಿಯ ಶಿಫಾರಸಿನ ಹಳೆಯ ಪಠ್ಯವನ್ನೇ ಈ ಬಾರಿಯೂ ಮುಂದುವರಿಸಬೇಕೆಂದು ಆಗ್ರಹಿಸಿದರು.