ಮೈಸೂರು, ಜೂ 09 (DaijiworldNews/DB): ಜೂ.10ರ ಶುಕ್ರವಾರದಂದು ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದಾಗಿ ಜಿ.ಟಿ. ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ನಿಂದ ಮಾನಸಿಕವಾಗಿ ಹೊರಬಂದ ಜಿ.ಟಿ. ದೇವೆಗೌಡರ ಹೆಸರು ಸದ್ಯ ಕಾಂಗ್ರೆಸ್ನೊಂದಿಗೆ ಕೇಳಿ ಬರುತ್ತಿದೆ. ಆದರೆ ನಾಳೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೇ ಮತ ಹಾಕುವುದಾಗಿ ಅವರು ಪ್ರಕಟಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ತಮಗೆ ಮತ ಹಾಕುವಂತೆ ನನ್ನಲ್ಲಿ ಮನವಿ ಮಾಡಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರೂ ಇದೇ ಮಾತು ಹೇಳಿದ್ದಾರೆ. ನನ್ನ ಬೆಂಬಲಿಗರು ಮತ್ತು ಕ್ಷೇತದ ಮುಖಂಡರು ಕೂಡಾ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡುವ ಅವಶ್ಯವಿಲ್ಲ ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಶಾಸಕ ಗೌರಿಶಂಕರ್ ಅವರು ಪ್ರವಾಸದ ನೆಪ ಹೇಳಿ ನಾಪತ್ತೆಯಾಗಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್ ಕೂಡ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದರಿಂದ ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಜಿಟಿಡಿ ತಮ್ಮ ವಿರುದ್ದ ಕೇಳಿ ಬರುತ್ತಿದ್ದ ಸುದ್ದಿಗಳಿಗೆ ಇದೀಗ ಸ್ಪಷ್ಟನೆ ನೀಡಿದ್ದಾರೆ.