ಶಿವಮೊಗ್ಗ, ಜೂ 08 (DaijiworldNews/DB): ಅವಶ್ಯಕತೆಗಳ ಈಡೇರಿಕೆಗಾಗಿ ಜನರು ಚಿತ್ರ ವಿಚಿತ್ರ ರೀತಿಯ ಪ್ರತಿಭಟನೆಗಳ ಮೊರೆ ಹೋಗುತ್ತಾರೆ. ಇಲ್ಲೊಬ್ಬರು ರೈತ ಮನೆಗೆ ವಿದ್ಯುತ್ ಪೂರೈಕೆಯಾಗದ ಕಾರಣಕ್ಕಾಗಿ ಮೆಸ್ಕಾಂಗೆ ಬಿಸಿ ಮುಟ್ಟಿಸಲು ವಿನೂತನ ರೀತಿಯ ಪ್ರತಿಭಟನೆಗಿಳಿದಿದ್ದಾರೆ. ಕಳೆದ ಎಂಟು ತಿಂಗಳಿಂದ ಮೆಸ್ಕಾಂ ಕಚೇರಿಗೆ ಮಿಕ್ಸಿ ಕೊಂಡೊಯ್ದು ಮಸಾಲೆ ರುಬ್ಬಿಕೊಂಡು ಬರುತ್ತಾರೆ. ಮೊಬೈಲ್ನ್ನೂ ಮೆಸ್ಕಾಂ ಕಚೇರಿಯಲ್ಲೇ ಚಾರ್ಜ್ ಮಾಡುತ್ತಿದ್ದಾರೆ!
ಹೊಳೆಹೊನ್ನೂರು ಸಮೀಪದ ಮಂಗೋಟೆ ಗ್ರಾಮದ ರೈತ ಹನುಮಂತ ಅವರೇ ಈ ರೀತಿಯ ಪ್ರತಿಭಟನೆಯ ಮೊರೆ ಹೋದವರು. ಕಳೆದ ವರ್ಷ ತಮ್ಮ ಸ್ವಂತ ಹಣದಲ್ಲೇ ಟಿಸಿ ಅಳವಡಿಸಿಕೊಂಡು ಅವರು ಮನೆಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಮೆಸ್ಕಾಂ ಅಧಿಕಾರಿಗಳು ಮೀಟರ್, ವಿದ್ಯುತ್ ಕಂಬ ಹಾಕಿ ಹೋಗಿದ್ದರು. ಆದರೆ ಖರ್ಚು ಮಾಡಿ ವಿದ್ಯುತ್ ತಂದರೂ ಕೇವಲ ಎರಡು ಗಂಟೆ ಮಾತ್ರ ಮೆಸ್ಕಾಂ ವಿದ್ಯುತ್ ಒದಗಿಸುತ್ತಿತ್ತು. ಮೊದಲೆರಡು ತಿಂಗಳು ಅಕ್ಕಪಕ್ಕದ ಮನೆಗಳಲ್ಲಿ ಮಸಾಲೆ ರುಬ್ಬಿ, ಮೊಬೈಲ್ ಚಾರ್ಜ್ ಮಾಡುತ್ತಿದ್ದರು.
ಬಳಿಕ ಮೆಸ್ಕಾಂ ಎಂಜಿನಿಯರ್ನ್ನು ಹನುಮಂತ ತರಾಟೆಗೆ ತೆಗೆದುಕೊಂಡರು. ಈ ವೇಳೆ ಮನೆಯಲ್ಲಿ ಕರೆಂಟ್ ಇಲ್ಲದಿದ್ದರೆ ಕೆಇಬಿಗೆ ಬಂದು ಮಸಾಲೆ ರುಬ್ಬಿಕೊಂಡು ಹೋಗುತ್ತೀಯಾ ಎಂದು ಎಂಜಿನಿಯರ್ ಕೇಳಿದ್ದಾರೆ. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಹನುಮಂತ ನಿತ್ಯ ಮಂಗೋಟೆಯಿಂದ ಮಲ್ಲಾಪುರದ ವಿತರಣಾ ಕೇಂದ್ರಕ್ಕೆ ಮಿಕ್ಸಿ ತಂದು ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ. ಮನೆಯ ಸುಮಾರು ಏಳೆಂಟು ಮೊಬೈಲ್ನ್ನು ಕೂಡಾ ಅಲ್ಲೇ ಚಾರ್ಜ್ ಮಾಡುತ್ತಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಹನುಮಂತ ಈ ರೀತಿ ಮಾಡುತ್ತಿದ್ದರೂ, ಯಾವುದೇ ಅಧಿಕಾರಿಗಳು ಅವರ ವಿದ್ಯುತ್ ಸಮಸ್ಯೆ ಬಗೆಹರಿಸ;ಲು ಮುಂದಾಗಿಲ್ಲ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹನುಮಂತ, ಕಳೆದ ಎಂಟು ತಿಂಗಳಿನಿಂದ ಕೆಇಬಿಗೆ ಬಂದು ಮಸಾಲೆ ರುಬ್ಬಿಕೊಂಡು, ಮೊಬೈಲ್ ಚಾರ್ಜ್ ಮಾಡಿಕೊಂಡು ಹೋಗುತ್ತಿದ್ದೇನೆ. ಆದರೆ ಯಾರೂ ಈ ವರೆಗೆ ತಡೆಯುವ ಪ್ರಯತ್ನ ಮಾಡಿಲ್ಲ. ಮನೆಯಲ್ಲಿ ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಯಿರುವುದರಿಂದ ವಿದ್ಯುತ್ ಸಮಸ್ಯೆಯಿಂದಾಗಿ ಆನ್ಲೈನ್ ತರಗತಿಗೆ ಹಾಜರಾಗುವುದಕ್ಕೆ ತೀರಾ ತೊಂದರೆಯಾಗುತ್ತಿದೆ ಎನ್ನುತ್ತಾರೆ.