ಮುಂಬೈ, ಜೂ 09 (DaijiworldNews/MS): ಸುದ್ದಿ ವಾಹಿನಿಯೊಂದರ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಮಾಡಿದ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಈಗಾಗಲೇ ಪಕ್ಷ ಅಮಾನತುಗೊಳಿಸಿದೆ. ಹೇಳಿಕೆ ಕುರಿತು ಈಗಾಗಲೇ ಕ್ಷಮೆ ಯಾಚಿಸಿರುವ ಶರ್ಮಾ, ತಮ್ಮ ಮಾತುಗಳನ್ನು ಹಿಂಪಡೆದಿದ್ದಾರೆ.
ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆಯನ್ನ ಸಮರ್ಥಿಸಿಕೊಂಡಿರುವ ನಟಿ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ, 'ನೂಪುರ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಂಪೂರ್ಣ ಅರ್ಹತೆ ಹೊಂದಿದ್ದಾರೆ. ಅವರಿಗೆ ಹಲವೆಡೆಯಿಂದ ಬರುತ್ತಿರುವ ಬೆದರಿಕೆ ಕರೆಗಳನ್ನ ನಾನು ನೋಡುತ್ತಿದ್ದೇನೆ. ನಿತ್ಯ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದಾಗ ನಾವು ನ್ಯಾಯಾಲಯ ಮೊರೆ ಹೋಗಬೇಕು. ದೇಶದಲ್ಲಿ ಚುನಾಯಿತ ಬಿಜೆಪಿ ಸರ್ಕಾರವಿದೆ. ಇದು ಅಫ್ಘಾನಿಸ್ತಾನ ಅಲ್ಲ, ನಿಮ್ಮ ವಿಚಾರವನ್ನು ನ್ಯಾಯಾಲಯದಲ್ಲಿ ಹಂಚಿಕೊಳ್ಳಿ' ಎಂದು ಹೇಳಿದ್ದಾರೆ.
ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕೋಲಾಹಲ ಸೃಷ್ಟಿಸಿದ ನೂಪುರ್ ಶರ್ಮಾ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇರೆಗೆ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ದೂರು ದಾಖಲಾಗಿದೆ. ಇರಾನ್, ಕುವೈತ್ನಂತಹ ಇಸ್ಲಾಮಿಕ್ ರಾಷ್ಟ್ರಗಳು ಶರ್ಮಾ ವಿವಾದಾತ್ಮಕ ಹೇಳಿಕೆ ಬಗ್ಗೆ ಭಾರತೀಯ ರಾಯಭಾರಿಗಳಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು.