ತಿರುವನಂತಪುರಂ, ಜೂ 08 (DaijiworldNews/DB): ಕೇರಳ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಸ್ವತಃ ಕೇರಳ ಮುಖ್ಯಮಂತ್ರಿ ಮತ್ತವರ ಕುಟುಂಬ ಶಾಮೀಲಾಗಿರುವುದಾಗಿ ಪ್ರಮುಖ ಆರೋಪಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಈ ಕುರಿತು ಕೋರ್ಟ್ನಲ್ಲಿ ಹೇಳಿಕೆ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪತ್ನಿ ಕಮಲಾ ವಿಜಯನ್, ಪುತ್ರಿ ವೀಣಾ ವಿಜಯನ್, ಮಾಜಿ ಕಾರ್ಯದರ್ಶಿ ನಳಿನಿ ನಿಟ್ಟೋ, ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿಎಂ ರವೀಂದ್ರನ್, ಹಾಲಿ ಸಚಿವ ಕೆ.ಟಿ. ಜಲೀಲ್ ಮುಂತಾದವರು ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪಿಣರಾಯಿ ವಿಜಯನ್ ಅವರು 2016ರಲ್ಲಿ ದುಬೈಗೆ ತೆರಳಿದ್ದ ವೇಳೆ ಆಗ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿವಶಂಕರ್ ದುಬೈ ಭೇಟಿಯ ಎಲ್ಲಾ ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ದರು. ಆದರೆ ಎರಡು ದಿನದ ಬಳಿಕ ಕರೆ ಮಾಡಿ ಸಿಎಂ ಬ್ಯಾಗ್ ಮರೆತು ಬಂದಿದ್ದು, ಅದನ್ನು ದುಬೈಗೆ ಕಳುಹಿಸಿಕೊಡುವಂತೆ ತಿಳಿಸಿದ್ದ ಕಾರಣ ಬ್ಯಾಗ್ನ್ನು ಕಳುಹಿಸಲಾಗಿತ್ತು. ಆದರೆ ಅದನ್ನು ತಪಾಸಣೆ ನಡೆಸಿದ ವೇಳೆ ಅದರಲ್ಲಿ ಹಣ ಪತ್ತೆಯಾಗಿದ್ದು, ಚಿನ್ನ ಕಳ್ಳಸಾಗಾಣೆಯೂ ಗೊತ್ತಾಗಿತ್ತು ಎಂದು ಆಪಾದಿಸಿದ್ದಾರೆ.
ಆದರೆ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, ಇದೊಂದು ರಾಜಕೀಯ ಪ್ರೇರಿತವಾದ ಆರೋಪವಾಗಿದೆ ಎಂದಿದ್ದಾರೆ.