ಬೆಂಗಳೂರು, ಜೂ 08 (DaijiworldNews/DB): ಕೋಮುವಾದಿಗಳನ್ನು ಸೋಲಿಸಲು ನಾವು ಸಮರ್ಥರಿದ್ದೇವೆ. ಜೆಡಿಎಸ್ನವರಿಗೆ ಆ ಯೋಚನೆಯಿದ್ದರೆ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಗೆ ಬೆಂಬಲ ನೀಡುವಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಹ್ವಾನಕ್ಕೆ ತಿರುಗೇಟು ನೀಡಿದ ಅವರು, ಕೋಮುವಾದಿಗಳನ್ನು ಸೋಲಿಸಬೇಕೆಂಬ ಇಚ್ಚೆ ಜೆಡಿಎಸ್ನವರಿಗಿದ್ದರೆ ನಮ್ಮ ಅಭ್ಯರ್ಥಿಯನ್ನು ಅವರು ಬೆಂಬಲಿಸಲಿ. ನಾವಂತೂ ಕೋಮುವಾದಿಗಳನ್ನು ಸೋಲಿಸುತ್ತೇವೆ ಎಂದರು.
ಅಲ್ಪಸಂಖ್ಯಾತ ಅಭ್ಯರ್ಥಿ ಮನ್ಸೂರ್ ಅವರನ್ನು ಎರಡನೇ ಅಭ್ಯರ್ಥಿಯಾಗಿ ಒಂದು ತಿಂಗಳ ಹಿಂದೆಯೇ ನಿರ್ಧರಿಸಿದ್ದೇವೆ. ಜೆಡಿಎಸ್ನವರಿಗೆ ಅಲ್ಪಂಖ್ಯಾತರ ಬಗ್ಗೆ ಕಾಳಜಿಯಿದ್ದರೆ ಮನ್ಸೂರ್ಗೆ ಬೆಂಬಲ ನೀಡಲಿ. ಬಿಜೆಪಿಯವರು ಸಿಎಂ ಆಗಬಾರದು ಎಂಬ ಕಾರಣಕ್ಕಾಗಿ ಈ ಹಿಂದೆ ನಾವು ಕುಮಾರಸ್ವಾಮಿಯವರನ್ನು ಸಿಎಂ ಮಾಡಲಿಲ್ಲವೇ? ದೇವೇಗೌಡರು ಪ್ರಧಾನಿಯಾಗಲು ನಾವೂ ಬೆಂಬಲ ನೀಡಲಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಜೆಡಿಎಸ್ನವರಿಗೆ ನಾವು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಬೇಕಿದ್ದರೆ ಅವರೇ ನಮಗೆ ಬೆಂಬಲ ನೀಡಿ ನಮ್ಮ ಅಭ್ಯರ್ಥಿ ಪರ ಇರಲಿ ಎಂದರು.