ವಿಜಯಪುರ, ಜೂ 08 (DaijiworldNews/DB): ಮುಖ್ಯಮಂತ್ರಿಯಾಗಿದ್ದವರ ಮಗ ಮುಖ್ಯಮಂತ್ರಿಯಾದರೆ ತಪ್ಪೇನಿಲ್ಲ. ಬಿಎಸ್ವೈ ಪುತ್ರ ವಿಜಯೇಂದ್ರಗೆ ನಾಯಕನಾಗುವ ಎಲ್ಲಾ ಅರ್ಹತೆಯೂ ಇದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಯಾರ ಹಣೆಬರಹದಲ್ಲಿ ಏನು ಬರೆದಿದೆಯೋ ಹಾಗೆಯೇ ಆಗುತ್ತದೆ. ರಾಜ್ಯದವರು ಪ್ರಧಾನಿಯಾಗಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಮಗ ಮುಖ್ಯಮಂತ್ರಿಯಾಗಲೂಬಹುದು. ವಿಜಯೇಂದ್ರಗೆ ಆ ಅರ್ಹತೆ ಖಂಡಿತಾ ಇದೆ. ರಾಜ್ಯ, ರಾಷ್ಟ್ರ ನಾಯಕರು ತೀರ್ಮಾನಿಸಿದರೆ ಅವರು ನಾಯಕನಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಹೈಕಮಾಂಡ್ ಅವರಿಗೆ ಯಾವ ಜವಾಬ್ದಾರಿ ನೀಡಬೇಕೆಂಬುದನ್ನು ನಿರ್ಧರಿಸುತ್ತದೆ. ಯಡಿಯೂರಪ್ಪ ನಮ್ಮ ಪಕ್ಷದ ಮುಂಚೂಣಿ ನಾಯಕರು. ಅವರ ಕುಟುಂಬಕ್ಕೆ ಮೂರು ಸೀಟು ನೀಡಲಾಗಿದೆ. ದೇಶದಲ್ಲೇ ಇಂತಹ ಅವಕಾಶವನ್ನು ಯಾರಿಗೂ ನೀಡಿಲ್ಲ. ವಿಜಯೇಂದ್ರ ಕೆಲಸ ಮಾಡಿದಷ್ಟು ಅವರು ಬೆಳೆಯುತ್ತಾರೆ. ಎಲ್ಲರ ಆಶೀರ್ವಾದದಿಂದ ಅವರು ಇನ್ನಷ್ಟು ಎತ್ತರಕ್ಕೇರುತ್ತಾರೆ. ಕಾಂಗ್ರೆಸ್ಸಿಗರು ಬೇರೆಯವರ ವಿಚಾರ ಮಾತನಾಡುವ ಮುನ್ನ ತಮ್ಮನ್ನು ಸರಿ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.