ಲಕ್ನೋ, ಜೂ 08 (DaijiworldNews/DB): ಪಬ್ಜಿ ಆನ್ಲೈನ್ ವೀಡಿಯೋ ಗೇಮ್ ಆಡಲು ಬಿಡುತ್ತಿಲ್ಲವೆಂಬ ಕಾರಣಕ್ಕೆ ಬಾಲಕನೋರ್ವ ತನ್ನ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಲಕ್ನೋದಲ್ಲಿ ನಡೆದಿದೆ.
16 ವರ್ಷದ ಬಾಲಕ ಆನ್ಲೈನ್ ಗೇಮ್ ವ್ಯಸನಿಯಾಗಿದ್ದು, ಇದಕ್ಕಾಗಿ ತಾಯಿ ಆತನಿಗೆ ಗದರುತ್ತಿದ್ದರು. ಪಬ್ಜಿ ಆಡದಂತೆ ತಡೆದ ತಾಯಿಯನ್ನು ತಂದೆಯ ಪುಸ್ತೂಲಿನಿಂದ ಗುಂಡಿ ಹಾರಿಸಿ ಕೊಂದಿದ್ದಾನೆ. ಘಟನೆ ಬಗ್ಗೆ ಮಾಹಿತಿ ಬಂದ ತತ್ಕ್ಷಣ ಪೊಲೀಸರು ಮತ್ತು ವಿಧಿ ವಿಜ್ಞಾನ ತಂಡದವರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ. ಶನಿವಾರ ಅಥವಾ ಭಾನುವಾರ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೂರ್ವ ಲಕ್ನೋದ ಎಡಿಸಿಪಿ ಖಾಸಿಮ್ ಅಬಿದಿ ಮಂಗಳವಾರ ತಿಳಿಸಿದ್ದಾರೆ.
ನಕಲಿ ಕತೆ ಹೇಳುವ ಮೂಲಕ ಬಾಲಕ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ. ಆದರೆ ಬಾಲಕನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಪಬ್ಜಿ ಆಡದಂತೆ ತಾಯಿ ತಡೆಯುತ್ತಿದ್ದ ಕಾರಣ ಹತ್ಯೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಂದವರು ವಿವರಿಸಿದ್ದಾರೆ.