ಹೈದರಾಬಾದ್, ಜೂ 08 (DaijiworldNews/DB): ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರೊಬ್ಬರ ಪುತ್ರ ಸಹಿತ ಎಲ್ಲಾ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಓರ್ವ ವಯಸ್ಕ, ಐವರು ಅಪ್ರಾಪ್ತರು ಸೇರಿದ್ದಾರೆ. ಬಾಲಾಪರಾಧಿಯಲ್ಲಿ ಓರ್ವ ಶಾಸಕರೊಬ್ಬರ ಪುತ್ರ ಎಂದು ಹೇಳಲಾಗುತ್ತಿದ್ದು, ಆತನ ವಿರುದ್ದ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸರ್ಕಾರಿ ಕೆಲಸಕ್ಕೆಂದು ಬಾಡಿಗೆಗೆ ಪಡೆದ ಇನ್ನೋವಾ ಕಾರಿನಲ್ಲಿ 17 ವರ್ಷದ ಬಾಲಕಿ ಮೇಲೆ ಆರೋಪಿಗಳು ಅತ್ಯಾಚಾರ ಎಸಗಿದ್ದರು ಎಂದ ಪೊಲೀಸರು ತಿಳಿಸಿದ್ದಾರೆ.
ಇನ್ನು ಬಾಲಾಪರಾಧಿಗಳ ಪೈಕಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕನ ಪುತ್ರನೂ ಇದ್ದಾನೆ. ಆರೋಪಿಗಳ ಬಂಧನದ ಕುರಿತಂತೆ ಮಂಗಳವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಸಿ.ವಿ. ಆನಂದ್, ಆರೋಪಿಗಳ ಪೈಕಿ ಓರ್ವನಿಗೆ 18 ವರ್ಷ ತಿಂಗಳು ಪೂರ್ತಿಯಾಗಲು ಒಂದು ತಿಂಗಳು ಬಾಕಿ ಇದೆ ಎಂದರು.
ಬಲವಾದ ಸಾಕ್ಷಿಗಳನ್ನು ಅನುಸರಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 ಡಿ (ಗ್ಯಾಂಗ್ ಅತ್ಯಾಚಾರ), 323 (ಗಾಯ ಉಂಟು ಮಾಡುವುದು), ಸೆಕ್ಷನ್ 5 ಜಿ ರೀಡ್ ವಿಥ್ 6 ರ ಮಕ್ಕಳ ಲೈಂಗಿಕ ಅಪರಾಧಗಳಿಂದ (ಪೋಕ್ಸೊ) ಕಾಯ್ದೆ, 366 ಮತ್ತು 366 ಎ (ಅಪಹರಣ) ಅಡಿಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ವಿಶೇಷ ನ್ಯಾಯಾಲಯದಲ್ಲಿ ಎಲ್ಲಾ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು. 20 ವರ್ಷಗಳಿಗಿಂತ ಕಡಿಮೆಯಿಲ್ಲದ ಶಿಕ್ಷೆ ಅಥವಾ ಮರಣದವರೆಗೆ ಜೀವಾವಧಿ ಶಿಕ್ಷೆಯನ್ನು ಸಹ ಆರೋಪಿಗಳು ಅನುಭವಿಸಬೇಕಾಗಿ ಬರಬಹುದು ಎಂದವರು ತಿಳಿಸಿದರು.
ಕಾನೂನು ಸಂಘರ್ಷದಲ್ಲಿರುವ ಆರನೇ ಬಾಲಕ ಅತ್ಯಾಚಾರ ಎಸಗಿಲ್ಲವಾದರೂ ಸಂತ್ರಸ್ತೆಯನ್ನು ಚುಂಬಿಸಿದ್ದಾನೆ. ಹೀಗಾಗಿ ಆತನ ವಿರುದ್ಧ ಐಪಿಸಿ ಸೆಕ್ಷನ್ 354, 323 ಮತ್ತು ಸೆಕ್ಷನ್ 9 ಜಿ ರೀಡ್ ವಿಥ್ 10 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈತ ಸುಮಾರು ಐದರಿಂದ ಏಳು ವರ್ಷ ಕಾಲ ಶಿಕ್ಷೆ ಅನುಭವಿಸಬೇಕಾಗಿ ಬರಬಹುದು ಎಂದರು.
ಮೇ 28 ರಂದು ಪಬ್ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಪ್ರಮುಖ ಆರೋಪಿ ಮತ್ತು ಒಬ್ಬ ಅಪ್ರಾಪ್ತ ಆಕೆಯ ಜೊತೆ ಅನುಚಿತ ವರ್ತನೆ ತೋರಿದ್ದಾರೆ. ಬಾಲಕಿಯನ್ನು ಪಬ್ ಹೊರಗಡೆ ಹಿಂಬಾಲಿಸಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬೇಕರಿಗೆ ಹೋಗಲೆಂದು ನಾಲ್ವರು ಅಪ್ರಾಪ್ತರು ಮತ್ತು ಹುಡುಗಿ ಮರ್ಸಿಡಿಸ್ ಕಾರು ಹತ್ತಿದ್ದು, ಪ್ರಮುಖ ಆರೋಪಿ ಮತ್ತು ಇತರ ನಾಲ್ವರು ಬಾಲಕರು ಇನ್ನೋವಾದಲ್ಲಿ ತೆರಳಿದ್ದಾರೆ. ಬೇಕರಿಗೆ ಹೋಗುವಾಗ ಮರ್ಸಿಡಿಸ್ ಕಾರಿನಲ್ಲಿದ್ದ ಬಾಲಕರು ಬಲವಂತವಾಗಿ ಆಕೆಯನ್ನು ಚುಂಬಿಸಿ ವೀಡಿಯೋ ತೆಗೆದುಕೊಂಡಿದ್ದು, ಅದನ್ನು ಸಾಮಾಜಿಕ ತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ. ಆರೋಪಿಗಳು ಬಾಲಕಿಯನ್ನು ಸೀದಾ ಪೆದಮ್ಮ ದೇವಳದ ಹಿಂಭಾಗದ ರಸ್ತೆಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದಾರೆ. ಆ ಬಳಿಕ ಆಕೆಯನ್ನು ಪಬ್ಗೆ ಕರೆ ತಂದು ಅಲ್ಲಿ ಕಾರಿನಿಂದ ಬೀಳಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.