ಬೆಂಗಳೂರು, ಜೂ 08 (DaijiworldNews/MS): ಹಿರಿಯ ನಾಗರಿಕರ ಸಮಸ್ಯೆ, ದೂರು ಮತ್ತು ಕೋರಿಕೆಗಳಿಗೆ ಸ್ಪಂದಿಸದೆ ಸರಕಾರಿ ಕಚೇರಿಗಳಿಗೆ ಅಲೆದಾಡಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಈ ಸಂಬಂಧ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಸೂಕ್ತ ನಿರ್ದೇಶನ ನೀಡಲು ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಂಗಳವಾರ ಸುತ್ತೋಲೆ ಹೊರಡಿಸಿದೆ.
ಹಿರಿಯ ನಾಗರಿಕರು ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಗೌರವದಿಂದ ವರ್ತಿಸಿ, ಆಸನದ ವ್ಯವಸ್ಥೆ ಮಾಡಬೇಕು. ಅವರ ಮನವಿಯನ್ನು ಆದ್ಯತೆ ಮೇಲೆ ಪರಿಗಣಿಸಬೇಕು. ಈ ಸುತ್ತೋಲೆ ಹೊರಡಿಸಿದ್ದರೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ ಎಂಬ ದೂರುಗಳು ಸ್ವಿಕೃತವಾಗಿದೆ.
ಹೀಗಾಗಿ ಇನ್ನು ಮುಂದೆ ಸುತ್ತೋಲೆಯನ್ನು ಅಕ್ಷರಶಃ ಪಾಲಿಸಬೇಕು. ಹಿರಿಯ ನಾಗರಿಕರ ಮನವಿಗಳಿಗೆ ಸ್ಪಂದಿಸದೆ, ಅಗೌರವದಿಂದ ನಡೆಸಿಕೊಳ್ಳುವ ನಿರ್ದಿಷ್ಟ ದೂರುಗಳನ್ನು ಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ ವಿರುದ್ದ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.