ಬೆಂಗಳೂರು, ಜೂ 07 (DaijiworldNews/SM): ರಾಜ್ಯದಲ್ಲಿ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿದ್ದ ಪಠ್ಯ ಪುಸ್ತಕ ವಿವಾದ ವಿಚಾರಕ್ಕೆ ಸರಕಾರ ತೆರೆ ಎಳೆಯಲು ಮುಂದಾಗಿದೆ. ಕರ್ನಾಟಕ ಪಠ್ಯ ಪುಸ್ತಕ ವಿವಾದ ತಾರಕ್ಕೇರಿದ ಬಳಿಕ ಪಠ್ಯಪುಸ್ತಕ ಸಮಿತಿಯನ್ನು ವಿಸರ್ಜಿಸಲಾಗಿತ್ತು. ಇದೀಗ ಅದರ ಮುಂದುವರೆದ ಭಾಗವನ್ನು ಸರಕಾರ ಕೈಗೊಂಡಿದೆ. ಇದೀಗ ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ಸಮಿತಿಯಿಂದ ರೋಹಿತ್ ಚಕ್ರತೀರ್ಥರನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ.
"ಪಠ್ಯಪುಸ್ತಕ ಪರಿಷ್ಕರಣೆಗಾಗಿ ರೋಹಿತ್ ಚಕ್ರತೀರ್ಥಕರನ್ನು ಸರ್ಕಾರ ನೇಮಿಸಿತ್ತು. ಶಾಲಾ ಪಠ್ಯಪುಸ್ತಕ ಮರುಪರಿಷ್ಕರಣೆಯಲ್ಲಿ ವಿವಾದಗಳು ಹೆಚ್ಚಾಗಿದ್ದವು. ಸಾಹಿತಿಗಳು, ರಾಜಕಾರಣಿಗಳು, ಮಠಾಧೀಶರು, ಪ್ರಬಲ ಜಾತಿಯ ವಿರೋಧ ಎದುರಾಗಿದ್ದರಿಂದ ರೋಹಿತ್ ಚಕ್ರತೀರ್ಥರನ್ನು ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಿಂದ ಕೈಬಿಡಲು ಸರ್ಕಾರ ತೀರ್ಮಾನಿಸಿದೆ," ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಹೊಸಧರ್ಮಗಳ ಉದಯ ಎಂಬ ಪಠ್ಯವನ್ನು ಪರಿಷ್ಕರಣೆಯನ್ನು ಮಾಡಲು ಸರ್ಕಾರ ಮುಂದಾಗಿತ್ತು. ಈ ಪಠ್ಯದ ಪರಿಷ್ಕರಣೆಯ ಜವಾಬ್ದಾರಿಯನ್ನು ರೋಹಿತ್ ಚಕ್ರತೀರ್ಥರಿಗೆ ವಹಿಸಲಾಗಿತ್ತು. ಶಾಲೆಗಳ ಪಠ್ಯಪುಸ್ತಕದಲ್ಲಿ ವಿವಾದಗಳು ತೆಲೆದೋರಿದ ಹಿನ್ನೆಲೆಯಲ್ಲಿ ಮತ್ತು ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥರ ಸಮಿತಿಯನ್ನು ಕೈಬಿಡಲು ಶಿಕ್ಷಣ ಸಚಿವ ಬಿಸಿ ನಾಗೇಶ್ ಮುಂದಾಗಿದ್ದಾರೆ. ಇನ್ನು ರೋಹಿತ್ ಚಕ್ರತೀರ್ಥರ ಸಮಿತಿಯನ್ನು ವಿಸರ್ಜಿಸಿರುವ ಕಾರಣ ಪಿಯುಸಿಯ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲಎಂದು ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.