ಬೆಂಗಳೂರು, ಜೂ 07 (DaijiworldNews/DB): ಚಾಮರಾಜಪೇಟೆಯ ಟೆಂಪಲ್ ಸ್ಟ್ರೀಟ್ ನಿವಾಸಿಯಾಗಿದ್ದ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್ಗುರಾಜ್ ಜೈನ್ ಅವರ ಕೊಲೆ ಪ್ರಕರಣದ ರಹಸ್ಯವನ್ನು ಕೊನೆಗೂ ಪೊಲೀಸರು ಬೇಧಿಸಿದ್ದಾರೆ. ಕೊಲೆ ಆರೋಪಿಯು ತನ್ನ ಪತ್ನಿಯ ಹಿಂಸೆಯಿಂದಾಗಿ ಈ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಕಳೆದ ಮೇ 24ರಂದು ಕಣ್ಣಿಗೆ ಖಾರದಪುಡಿ ಎರಚಿ, ಕೈಕಾಲು ಕಟ್ಟಿ ಜುಗ್ಗುರಾಜ್ ಜೈನ್ ಅವರನ್ನು ಕೊಲೆ ಮಾಡಲಾಗಿತ್ತು. ಬಳಿಕ ಕೋಟ್ಯಂತರ ರೂಪಾಯಿ ನಗ-ನಾಣ್ಯ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಈ ಪ್ರಕರಣದ ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಈ ಮೊದಲೇ ಬಂಧಿಸಿದ್ದರು. ಇನ್ನೊಬ್ಬ ಆರೋಪಿ ರಾಜಸ್ಥಾನ ಮೂಲದ ಬಿಜೋರಾಮ್ ಎಂಬಾತನನ್ನು ಬಳಿಕ ಪೊಲೀಸರು ಗುಜರಾತ್ನಲ್ಲಿ ಬಂಧಿಸಿದ್ದು, ಆತನನ್ನುಬೆಂಗಳೂರಿಗೆ ಕರೆ ತಂದು ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಕೊಲೆ ಕೃತ್ಯದ ರಹಸ್ಯವನ್ನು ಆತ ಬಾಯ್ಬಿಟ್ಟಿದ್ದಾನೆ.
ಜುಗ್ಗುರಾಜ್ ಜೈನ್ ಬಳಿ ತಿಂಗಳಿಗೆ 15 ಸಾವಿರ ರೂ. ಸಂಬಳಕ್ಕೆ ಆತ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ ವೇತನ ಕಡಿಮೆಯಾಯಿತೆಂದು ಮತ್ತು ಹೆಚ್ಚಿನ ಹಣ ತರಬೇಕೆಂದು ಆತನ ಹೆಂಡತಿ ಪ್ರತಿದಿನ ಆತನಲ್ಲಿ ಗಲಾಟೆ ಮಾಡುತ್ತಿದ್ದಳು. ಇದರಿಂದ ಹಣ ಸಂಪಾದಿಸಲು ಬೇರೆ ದಾರಿ ಕಾಣದೆ ಮಾಲಕನನ್ನೇ ಕೊಲೆ ಮಾಡಿರುವುದಾಗಿ ಆತ ಪೊಲೀಸರೆದುರು ಹೇಳಿಕೊಂಡಿದ್ದಾನೆ. ಈ ಕೃತ್ಯಕ್ಕೆ ತನ್ನ ಪರಿಚಯದವರಾದ ಮಹೇಂದ್ರ, ಪೂರಾನ್ ಹಾಗೂ ಓಂ ಪ್ರಕಾಶ್ ಹಾಗೂ ಓಂರಾಮ್ ದೇವಸಿ ಅವರ ಸಹಾಯ ಪಡೆದಿದ್ದೇನೆ ಎಂದಿದ್ದಾನೆ. ಆರೋಪಿಗಳ ಪೈಕಿ ಓಂರಾಮ್ ದೇವಸಿ ಪರಾರಿಯಾಗಿದ್ದು, ಉಳಿದವರು ಪೊಲೀಸ್ ವಶದಲ್ಲಿದ್ದಾರೆ. ಬಂಧಿತರಿಂದ ಒಟ್ಟು 4,93 ಕೋಟಿ ರೂ. ಮೌಲ್ಯದ 8 ಕೆಜಿ 752 ಗ್ರಾಂ ಚಿನ್ನ, 3 ಕೆಜಿ 870 ಗ್ರಾಂ ಬೆಳ್ಳಿ, 53 ಲಕ್ಷ ರೂ. ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಪೊಲಿಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.