ಅಲಿಪುರ್ದವಾರ್, ಜೂ 07 (DaijiworldNews/DB): ಅಗತ್ಯ ಬಿದ್ದರೆ ರಕ್ತ ಹರಿಸಲೂ ಸಿದ್ದ. ಆದರೆ ರಾಜ್ಯ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಉತ್ತರ ಬಂಗಾಳದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮಂಡಿಸುತ್ತಿರುವ ಬಿಜೆಪಿ ನಿಲುವಿನ ವಿರುದ್ದ ಹರಿಹಾಯ್ದಿರುವ ಅವರು, ದಶಕಗಳಿಂದಲೂ ಉತ್ತರ ಬಂಗಾಳದ ಎಲ್ಲಾ ಜನರು ಸೌಹಾರ್ದದಿಂದ ಜೀವನ ನಡೆಸುತ್ತಿದ್ದಾರೆ. ಆದರೆ 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಹಲವು ತಂತ್ರಗಳನ್ನು ರೂಪಿಸುತ್ತಿದೆ. ಅದಕ್ಕಾಗಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪ್ರತ್ಯೇಕತಾವಾದಕ್ಕೆ ಪ್ರಚೋದನೆ ನೀಡುತ್ತಿದೆ. ಆದರೆ ಅದರ ಪ್ರಯತ್ನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಒಮ್ಮೆ ಗೂರ್ಖಾಲ್ಯಾಂಡ್, ಇನ್ನೊಮ್ಮೆ ಉತ್ತರ ಬಂಗಾಳ ಪ್ರತ್ಯೇಕ ರಾಜ್ಯವಾಗಬೇಕೆಂದು ಬಿಜೆಪಿ ಹೇಳುತ್ತಿದೆ. ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆ ಪಕ್ಷದಿಂದ ಇಂತಹ ಬೇಡಿಕೆಗಳು ವ್ಯಕ್ತವಾಗುತ್ತಿವೆ. ಆದರೆ ರಾಜ್ಯ ವಿಭಜನೆ ಮಾಡುವುದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ಬೇಕಾದರೆ ನನ್ನ ರಕ್ತವನ್ನು ನೀಡಲು ಸಿದ್ದನಿದ್ದೇನೆ. ಕೆಲವರಿಂದ ನನಗೆ ಬೆದರಿಕೆಗಳು ಬರುತ್ತಿದ್ದು, ಅವುಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದರು.