ಬೆಂಗಳೂರು, ಜೂ 07 (DaijiworldNews/DB): ಸಿದ್ದರಾಮಯ್ಯನವರೇ, ನಿಮ್ಮ ದಲಿತ ಪ್ರೀತಿ, ದಲಿತ ಪರವಾದ ಮತಗಟ್ಟೆಗೋ, ಅಧಿಕಾರದ ಕಟ್ಟೆಗೋ? ನಿಮಗೆ ನಿಜಕ್ಕೂ ದಲಿತರ ಶ್ರೇಯೋಭಿವೃದ್ಧಿಯ ಬಗ್ಗೆ ಕಳಕಳಿ ಇದ್ದರೆ, ಈ ಬಾರಿ ಕಾಂಗ್ರೆಸ್ ಗೆದ್ದರೆ ದಲಿತರೇ ಮುಖ್ಯಮಂತ್ರಿ ಎಂದು ಘೋಷಿಸಿ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬನ್ನಿ ನೋಡೋಣ ಎಂದು ಬಿಜೆಪಿ ಸವಾಲು ಹಾಕಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಜಿದ್ದಿಗೆ ಬಿದ್ದವರಂತೆ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಹಾಗಾದರೆ ಕಾಂಗ್ರೆಸ್ ಪಕ್ಷದಲ್ಲಿರುವ ದಲಿತರ ನಾಯಕರ ಪಾಡೇನು? ದಲಿತ ನಾಯಕರೇ ಮುಂದಿನ ಸಿಎಂ ಎಂದು ಘೋಷಿಸುವ ಧೈರ್ಯ ಇದೆಯೇ? ಎಂದು ಪ್ರಶ್ನಿಸಿದೆ.
ದಲಿತ ಶಾಸಕ ಅಖಂಡ ಅವರ ನೋವಿಗೆ ಸ್ಪಂದಿಸದೆ ನಿರ್ಲಕ್ಷಿಸಿದಿರಿ. ಕಾಂಗ್ರೆಸ್ ಪಕ್ಷ ದಲಿತರ ಬೆನ್ನ ಮೇಲೆ ಕುಳಿತು ಸವಾರಿ ಮಾಡಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತದೆ. ಅಧಿಕಾರಕ್ಕೆ ಬಂದರೆ ಬೆನ್ನಿನಿಂದಿಳಿದು, ತುಳಿಯುತ್ತದೆ. ದಲಿತ ಕಾಂಗ್ರೆಸ್ ಶಾಸಕ ಅಖಂಡಗೆ ಅನ್ಯಾಯವಾದಾಗಲೂ ಮೌನ, ದಲಿತ ಯುವಕರ ತಲೆ ಕಡಿದು ಕೊಂದಾಗಲೂ ಮೌನ. ದಲಿತರಿಗಿಂತ, ಮತಾಂಧರ ಮೇಲೇಕೆ ಹೆಚ್ಚಿನ ಪ್ರೀತಿ? ಎಂದು ಬಿಜೆಪಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.
ಅಂಬೇಡ್ಕರ್ ಪ್ರಭಾವಳಿಯ ಮುಂದೆ ತಮ್ಮ ವರ್ಚಸ್ಸು ಕುಂದುತ್ತದೆ ಎಂಬ ಭಯ ನೆಹರೂ ಅವರಿಗೆ ಕಾಡುತ್ತಿತ್ತು. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರನ್ನು ಹತ್ತಿಕ್ಕಲು ವ್ಯವಸ್ಥಿತ ಸಂಚು ರೂಪಿಸಿದರು. ಅಂಬೇಡ್ಕರ್ ಗತಿಸಿದಾಗ, ಅವರ ಶವಸಂಸ್ಕಾರಕ್ಕೂ ದಿಲ್ಲಿಯಲ್ಲಿ ಜಾಗ ಒದಗಿಸದೆ ಅವಮಾನಿಸಿದ್ದು ನಾವಲ್ಲ, ಕಾಂಗ್ರೆಸ್. ಕಾಂಗ್ರೆಸ್ ತನ್ನ ದಲಿತ ವಿರೋಧಿ ಅಸ್ತ್ರವನ್ನು ಮೊದಲು ಪ್ರಯೋಗ ಮಾಡಿದ್ದೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ. ಅಂಬೇಡ್ಕರ್ ಅವರನ್ನು ಸಂಚು ಮಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು. ಅದೇ ಕಾಂಗ್ರೆಸ್ ಈಗ ಅಂಬೇಡ್ಕರ್ ಜಪ ಮಾಡುತ್ತಿದೆ, ಚೋದ್ಯವಲ್ಲವೇ? ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ದಲಿತ ನಾಯಕರನ್ನು ವ್ಯವಸ್ಥಿತವಾಗಿ ಮಟ್ಟ ಹಾಕಲಾಯಿತು ಎಂದು ಬಿಜೆಪಿ ಆಪಾದಿಸಿದೆ.
ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ವಿ. ಶ್ರೀನಿವಾಸ್ ಪ್ರಸಾದ್ ಅವರನ್ನು ಕಾಂಗ್ರೆಸ್ ಮೂಲೆಗುಂಪು ಮಾಡಿತು. ದಲಿತ ಸಮುದಾಯದ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ ಏಕೆ? ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಾಗಲೆಲ್ಲ ಸಿದ್ದರಾಮಯ್ಯ ಜಾಗೃತರಾಗುತ್ತಿದ್ದಾರೆ, ತನ್ನ ಕನಸಿಗೆ ದಲಿತರು ಅಡ್ಡಬರುತ್ತಾರೆ ಎಂಬ ಭಯವೇ? ನನಗಿಂತರ ದೊಡ್ಡ ದಲಿತ ಯಾರಿದ್ದಾರೆ ಎಂಬ ಹೇಳಿಕೆಯ ಮೂಲಕ ಸಿದ್ದರಾಮಯ್ಯ ಅವರು ದಲಿತರನ್ನೆಂದಿಗೂ ಮುಖ್ಯಮಂತ್ರಿಯಾಗಲು ಬಿಡಲಾರೆ ಎಂಬ ಸಂದೇಶ ರವಾನಿಸಿದ್ದು ಸುಳ್ಳೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 358 ದಲಿತರು ಕೊಲ್ಲಲ್ಪಟ್ಟರು, 801 ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾದರು, 9081 ದಲಿತ ದೌರ್ಜನ್ಯದ ಪ್ರಕರಣ ನಡೆದಿತ್ತು. ಇಂತಹ ದಲಿತ ವಿರೋಧಿ ಕಾಂಗ್ರೆಸ್ ಈಗ ಸಂವಿಧಾನ ಶಿಲ್ಪಿಯ ಜಪ ಮಾಡುತ್ತಿರುವುದೇಕೆ? ಜೆಡಿಎಸ್ನಿಂದ ವಲಸೆ ಬಂದಿರುವ ಸಿದ್ದರಾಮಯ್ಯ ಅವರೇ, ನಿಮಗೆ ದಲಿತರು ಏನು ಅನ್ಯಾಯ ಮಾಡಿದ್ದಾರೆ? ದಲಿತ ನಾಯಕ ಖರ್ಗೆ ಅವರಿಗೆ ರಾಜಕೀಯ ಹಿನ್ನಡೆಯಾಗುವಂತೆ ಮಾಡಿದಿರಿ. ಮುಖ್ಯಮಂತ್ರಿ ಪದವಿಯಿಂದ ಪರಮೇಶ್ವರ್ರನ್ನು ದೂರ ಇಟ್ಟಿರಿ ಎಂದು ಟೀಕೆ ವ್ಯಕ್ತಪಡಿಸಿದೆ.