ಪಾಲಂ, ಜೂ. 07 (DaijiworldNews/DB): ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಂಗಿದ್ದ ಸರ್ಕಿಟ್ ಹೌಸ್ ನ ಕೊಠಡಿಯೊಂದರಲ್ಲಿ ಉಂಟಾದ ಬೆಂಕಿ ಆಕಸ್ಮಿಕದಿಂದ ಲಾಲು ಅವರು ಕೂದಲೆಳೆ ಅಂತರದಿಂದ ಪಾರಾದ ಘಟನೆ ಜಾರ್ಖಂಡ್ನ ಪಾಲಂ ಜಿಲ್ಲೆಯಲ್ಲಿ ನಡೆದಿದೆ.
ಲಾಲೂ ಪ್ರಸಾದ್ ಯಾದವ್ ಅವರು ಇಂದು ಬೆಳಗ್ಗೆ ಉಪಾಹಾರ ಸೇವಿಸುತ್ತಿದ್ದ ವೇಳೆ ಗೋಡೆಯಲ್ಲಿದ್ದ ಫ್ಯಾನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತತ್ಕ್ಷಣ ಅವರ ಜೊತೆಗಿದ್ದವರು ಬೆಂಕಿ ನಂದಿಸಿ ಅಪಾಯವನ್ನು ತಪ್ಪಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಬೆಂಕಿ ಕಾಣಿಸಿಕೊಂಡ ತತ್ಕ್ಷಣ ಕೊಠಡಿ ಆವರಣಕ್ಕೆ ವಿದ್ಯುತ್ ಪೂರೈಕೆ ನಿಲ್ಲಿಸಲಾಯಿತು. ಘಟನೆಯಿಂದ ಯಾವುದೇ ಅಪಾಯ ಉಂಟಾಗಿಲ್ಲ. ಬೆಂಕಿ ಕಾಣಿಸಿಕೊಂಡ ಫ್ಯಾನ್ನ್ನು ತೆಗೆದು ಹಾಕಲಾಗಿದ್ದು, ಕೊಠಡಿಯಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಶಿರಂಜನ್ ತಿಳಿಸಿದ್ದಾರೆ.
13 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಕೋರ್ಟ್ ಮುಂದೆ ಹಾಜರಾಗಲು ಲಾಲು ಪ್ರಸಾದ್ ಯಾದವ್ ಅವರು ಪಾಲಂಗೆ ಸೋಮವಾರ ಆಗಮಿಸಿದ್ದರು. ಹೀಗಾಗಿ ಇಲ್ಲಿನ ಸರ್ಕೀಟ್ ಹೌಸ್ನಲ್ಲಿ ತಂಗಿದ್ದರು.