ಬೆಂಗಳೂರು, ಜೂ. 07 (DaijiworldNews/DB): ಕೇಂದ್ರ ಹೊರಡಿಸಿರುವ ಮಂಕಿಪಾಕ್ಸ್ ಮಾರ್ಗಸೂಚಿಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸೂಚಿಸಿದ್ದಾರೆ.
ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಈಗಾಗಲೇ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಎಲ್ಲಾ ಜಿಲ್ಲೆಗಳು ಕಡ್ಡಾಯವಾಗಿ ನಿಗಾ ವಹಿಸಬೇಕು. ಯಾವುದೇ ಶಂಕಿತ ಪ್ರಕರಣ ಪತ್ತೆಯಾದಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಲು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಈಗಾಗಲೇ ಸೂಚಿಸಲಾಗಿದೆ. ಶಂಕಿತ ಪ್ರಕರಣ ಕಂಡು ಬಂದಲ್ಲಿ ತತ್ಕ್ಷಣ ಸ್ಕ್ರೀನಿಂಗ್, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಬೇಕು. ಜಿಲ್ಲೆಗಳಲ್ಲಿ ಆಸ್ಪತ್ರೆಗಳ ಬೆಡ್ನ್ನು ಇದಕ್ಕಾಗಿ ಕಾಯ್ದಿರಿಸಬೇಕು ಎಂದು ತಿಳಿಸಿದರು.
ಗ್ರಾಮಾಂತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯಾಧಿಕಾರಿಗಳು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ತಪಾಸಣೆ ವೇಳೆ ಶಂಕಿತ ಪ್ರಕರಣ ಗೊತ್ತಾದಲ್ಲಿ ಕೂಡಲೇ ಅದರ ಮಾದರಿ ಸಂಗ್ರಹಿಸಿ ಪುಣೆ ನ್ಯಾಷನಲ್ ಇನ್ಸ್ಟ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿಕೊಡಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.