ಕೋಲ್ಕತ್ತಾ, ಜೂ. 07 (DaijiworldNews/DB): ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದಕ್ಕೆ ಪತ್ನಿಯ ಅಂಗೈಯನ್ನೇ ಪತಿ ಕತ್ತರಿಸಿ ಹಾಕಿರುವ ಘಟನೆ ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ನ ಕೇತುಗ್ರಾಮ್ನಲ್ಲಿ ನಡೆದಿದೆ.
ಸಂತ್ರಸ್ತೆ ರೇಣು ಖಾತುನ್ ಅವರು ಕಳೆದ ಮೂರು ವರ್ಷಗಳಿಂದ ತಯಾರಿ ನಡೆಸಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ನೇಮಕ ಗೊಂಡಿದ್ದರು. ಮುಂದಿನ ವಾರವೇ ಅವರು ಸೇವೆಗೆ ಹಾಜರಾಗಬೇಕಿತ್ತು. ಆದರೆ ರೇಣು ಸರ್ಕಾರಿ ಕೆಲಸಕ್ಕೆ ತೆರಳುವುದು ಆಕೆಯ ಪತಿ, ಕಿರಾಣಿ ಅಂಗಡಿ ಮಾಲಿಕ ಮೊಹಮ್ಮದ್ ಮತ್ತು ಆತನ ಮನೆಯವರಿಗೆ ಇಷ್ಟವಿರಲಿಲ್ಲ. ಇದಕ್ಕಾಗಿ ಆರೋಪಿಯು ಪತ್ನಿ ರೇಣುವಿನ ಅಂಗೈಯನ್ನು ಕೊಚ್ಚಿ ಬಳಿಕ ಹರಿತವಾದ ಆಯುಧದಿಂದ ತುಂಡರಿಸಿದ್ದಾನೆ. ಬಳಿಕ ಕತ್ತರಿಸಿದ ಅಂಗೈಯನ್ನು ಅಡಗಿಸಿಟ್ಟು ಪ್ರಜ್ಞಾಹೀನಳಾಗಿದ್ದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಕೆಗೆ ಪ್ರಜ್ಞೆ ಬಂದ ಬಳಿಕ ನಡೆದ ವಿಷಯವನ್ನು ವಿವರಿಸಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.
ಪ್ರಸ್ತುತ ಆರೋಪಿ ಮೊಹಮ್ಮದ್ ಮತ್ತು ಆತನ ಪೋಷಕರು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭವಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಾಹಕ್ಕೂ ಮುನ್ನ ಖಾಸಗಿ ಆರೋಗ್ಯ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಗಳಿಗೆ ಇತ್ತೀಚೆಗಷ್ಟೇ ಸರ್ಕಾರಿ ಉದ್ಯೋಗ ಲಭಿಸಿತ್ತು. ಆದರೆ ಸರ್ಕಾರಿ ಸೇವೆಗೆ ಸೇರಬಾರದೆಂದು ರೇಣು ಅತ್ತೆ ಮತ್ತು ಪತಿ ಕಿರುಕುಳ ನೀಡುತ್ತಿರುವ ಬಗ್ಗೆ ಮಗಳು ನನ್ನಲ್ಲಿ ಹೇಳಿಕೊಂಡಿದ್ದಳು. ಆದರೆ ತನ್ನ ಗುರಿಯನ್ನು ಸಾಧಿಸಿದ ಆಕೆಯನ್ನು ಇಂತಹ ಸಂಕಷ್ಟಕ್ಕೆ ಪತಿ ಮತ್ತಾತನ ಮನೆಯವರು ದೂಡುತ್ತಾರೆಂದು ಊಹಿಸಿರಲಿಲ್ಲ ಎಂದು ರೇಣು ಅವರ ತಂದೆ ಅಜೀಜುಲ್ ಹಕ್ ಅಳಲು ತೋಡಿಕೊಂಡಿದ್ದಾರೆ.
ಈ ನಡುವೆ ರೇಣು ಸರ್ಕಾರಿ ಸೇವೆಗೆ ಸೇರಿದರೆ ನನ್ನನ್ನು ಬಿಟ್ಟು ಹೋಗಬಹುದು ಎಂದು ಮೊಹಮ್ಮದ್ ತನ್ನ ಸ್ನೇಹಿತರಲ್ಲಿ ಹೇಳಿಕೊಂಡಿದ್ದ ಎಂಬುದಾಗಿ ಪೊಲೀಸರಿಗೆ ತನಿಖೆ ವೇಳೆ ಗೊತ್ತಾಗಿದೆ. ತಂದೆ ಅಜೀಜುಲ್ ನೀಡಿದ ದೂರು ಮತ್ತು ರೇಣು ನೀಡಿದ ಹೇಳಿಕೆ ಆಧಾರದಲ್ಲಿ ಪೊಲೀಸರು ಆರೋಪಿ ಮಹಮದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.