ಜಮ್ಮು, ಜೂ. 07 (DaijiworldNews/DB): ಮಕ್ಕಳ ಟಿಫಿನ್ ಬಾಕ್ಸ್ನಲ್ಲಿಟ್ಟು ಡ್ರೋನ್ ಮೂಲಕ ಕಳುಹಿಸಲಾಗಿದ್ದ ಮೂರು ಮ್ಯಾಗ್ನೆಟಿಕ್ ಐಇಡಿ ಸ್ಪೋಟಕಗಳನ್ನು ಪೊಲೀಸರು ಜಮ್ಮುವಿನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಅಖನೂರ್ ಸೆಕ್ಟರ್ನ ಕನಚಕ್ನ ಕಂಟೊವಾಲ-ದಯಾರನ್ ಪ್ರದೇಶದಲ್ಲಿ ಸ್ಪೋಟಕಗಳು ಪೊಲೀಸರ ವಶವಾಗಿವೆ. ಟೈಮರ್ ಸೆಟ್ ಮಾಡಿದ್ದ ಈ ಸ್ಪೋಟಕಗಳನ್ನು ಮಕ್ಕಳ ಟಿಫಿನ್ ಬಾಕ್ಸ್ಗಳಲ್ಲಿ ಇಡಲಾಗಿತ್ತು ಎಂದು ಜಮ್ಮು ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ಜಮ್ಮು ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಸೋಮವಾರ ರಾತ್ರಿ ಶಬ್ದವೊಂದು ಕೇಳಿಬಂದ ಹಿನ್ನೆಲೆಯಲ್ಲಿ ಇದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ಡ್ರೋನ್ ಆಗಿರಬಹುದೆಂದು ಶಂಕಿಸಿ ತತ್ಕ್ಷಣ ಗುಂಡಿನ ದಾಳಿ ನಡೆಸಿದರು. ಅಲ್ಲದೆ ಶಬ್ದ ಬಂದ ಪ್ರದೇಶವನ್ನು ಸುತ್ತುವರಿದು ಡ್ರೋನ್ ನಿರೋಧಕ ಕ್ರಮಗಳನ್ನು ಕೈಗೊಳ್ಳಲಾಯಿತು. ಬಳಿಕ ರಾತ್ರಿ 11 ಗಂಟೆ ವೇಳೆಗೆ ಮತ್ತೆ ಡ್ರೋನ್ ಹಾರಾಡುತ್ತಿರುವುದು ಭದ್ರತಾ ಸಿಬಂದಿಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಲಾಯಿತು ಎಡಿಜಿಪಿ ಮಾಹಿತಿ ನೀಡಿದ್ದಾರೆ.
ಮೇ ತಿಂಗಳಿನಲ್ಲಿ ಪಾಕ್ನ ಡ್ರೋನ್ಗಳು ಹಲವು ಬಾರಿ ಭಾರತದ ಗಡಿಯೊಳಗೆ ನುಗ್ಗಲು ವಿಫಲ ಪ್ರಯತ್ನ ನಡೆಸಿದ್ದವು. ಮೇ 29ರಂದು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಏಳು ಮ್ಯಾಗ್ನೆಟಿಕ್ ಬಾಂಬ್ಗಳು, ಏಳು ಯುಬಿಜಿಎಲ್ (ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್) ಗ್ರೆನೇಡ್ಗಳನ್ನು ಹೊತ್ತ ಪಾಕಿಸ್ತಾನದ ಡ್ರೋನ್ನ್ನು ಪೊಲೀಸರು ಹೊಡೆದುರುಳಿಸಿದ್ದರು.