ಪಣಜಿ, ಜೂ. 07 (DaijiworldNews/DB): ಗೋವಾ ಪ್ರವಾಸಕ್ಕೆ ಪತಿಯೊಂದಿಗೆ ಆಗಮಿಸಿದ್ದ ಬ್ರಿಟನ್ ಮಹಿಳೆ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸ್ಥಳೀಯ ನಿವಾಸಿ ವಿನ್ಸೆಂಟ್ ಡಿಸೋಜ ( 32 ) ಎಂದು ಗುರುತಿಸಲಾಗಿದೆ. ಉತ್ತರ ಗೋವಾದ ಅರಂಬೋಲ್ ಬೀಚ್ ಸಮೀಪದ ಪ್ರಸಿದ್ಧ ಸ್ವೀಟ್ ಲೇಕ್ ಸಮೀಪ ಜೂನ್ 2ರಂದು ಬ್ರಿಟನ್ ಮಹಿಳೆ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಆರೋಪಿಯು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಸಂತ್ರಸ್ತ ಮಹಿಳೆ ತನ್ನ ಪತಿಯೊಂದಿಗೆ ಗೋವಾ ಪ್ರವಾಸಕ್ಕೆ ಆಗಮಿಸಿದ್ದರು. ಸೋಮವಾರ ಅತ್ಯಾಚಾರ ಪ್ರಕರಣವನ್ನು ದಂಪತಿ ದಾಖಲಿಸಿದ್ದರು. ದೂರು ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಕಲಂನಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.