ಬೆಂಗಳೂರು, ಜೂ. 07 (DaijiworldNews/DB): ಪಠ್ಯಪುಸ್ತಕದಲ್ಲಿ ಹಿಂದಿನ ಮತ್ತು ಈಗಿನ ಸಮಿತಿಗಳು ಯಾವೆಲ್ಲಾ ಪಠ್ಯ ತೆಗೆದಿದ್ದಾರೆ ಮತ್ತು ಸೇರ್ಪಡೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಿ ಅಭಿಪ್ರಾಯ ಸಂಗ್ರಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಕುರಿತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಆರ್.ಟಿ.ನಗರದ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಂಗಳವಾರ ಮಾಹಿತಿ ನೀಡಿದರು.
ನೂತನವಾಗಿ ಪರಿಷ್ಕರಣೆಗೊಂಡ ಪಠ್ಯವು ಸಾಹಿತ್ಯಿಕವಾಗಿ ಮತ್ತು ರಾಜಕೀಯವಾಗಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗಳು ಸೇರ್ಪಡೆ ಮಾಡಿರುವ ಮತ್ತು ಕೈ ಬಿಟ್ಟಿರುವ ಪಠ್ಯಗಳ ಕುರಿತು ಸಾರ್ವಜನಿಕರಿಗೆ ಇಲಾಖೆ ಮಾಹಿತಿ ನೀಡಲಿದೆ. ಇದಕ್ಕಾಗಿ ಶೀಘ್ರ ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್ಸೈಟ್ನಲ್ಲಿ ಇಲಾಖೆ ಮಾಹಿತಿ ಪ್ರಕಟಿಸಲಿದೆ. ಬಳಿಕ ಎರಡೂ ಸಮಿತಿಗಳು ಸೇರಿಸಿರುವ ಮತ್ತು ಕೈ ಬಿಟ್ಟಿರುವ ಪಠ್ಯಗಳ ವಿಚಾರದಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗುವುದು. ಅವಶ್ಯವಿದ್ದಲ್ಲಿ ಮುಂದೆ ಸೇರ್ಪಡೆ ಅಥವಾ ಕೈ ಬಿಡಬೇಕಾದ ಪಠ್ಯಗಳ ಕುರಿತು ಸರ್ಕಾರ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಶಿಕ್ಷಣ ಸಚಿವರು ವಿವರಿಸಿದ್ದಾರೆ.